ಧಾರವಾಡ: ಶಾಸಕರ ಸಭೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅದಕ್ಕೂ ಸಚಿವ ಸಂಪುಟ ಸಭೆಗೂ ಸಂಬಂಧ ಇರುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಸಿಎಂ ಮತ್ತು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ಹಿಂದೆಯೂ ಹುಬ್ಬಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಸಭೆ ಆಗಿತ್ತು. ಅದನ್ನೂ ಸಹ ರಹಸ್ಯ ಸಭೆ ಎಂದಿದ್ದರು. ಅದೆಲ್ಲ ಏನೂ ಇರುವುದೇ ಇಲ್ಲ. ಸದ್ಯ ಆಗುತ್ತಿರುವ ಸಭೆಗಳಿಗೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ ಎಂದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಷಡ್ಯಂತ್ರ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ತನ್ನ ಕೆಲಸ ಮಾಡುತ್ತಿದೆ. ನಮ್ಮ ಕೈವಾಡ ಇದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆ ರೀತಿ ಆರೋಪ ಮಾಡುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂದು ವ್ಯಂಗ್ಯವಾಡಿದರು.
ರವಿ ಬೆಳಗೆರೆ ನಿಧನ ನಮ್ಮೆಲ್ಲರಿಗೆ ದುಃಖ ತಂದಿದೆ. ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.