ಹುಬ್ಬಳ್ಳಿ: ಬಿಜೆಪಿ ಸರ್ಕಾರ ಐಟಿ ಬಿಟ್ಟು ಹೆದರಿಸಿ ಶಾಸಕರನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಸಿಎಎ,ಎನ್ಆರ್ಸಿಯನ್ನು ಜಾರಿಗೆ ತಂದಿದ್ದು, ಭಾರತದ ಆರ್ಥಿಕ ವ್ಯವಸ್ಥೆ ಕಡೆ ಜನ ಗಮನ ಕೊಡಬಾರದು ಎಂಬ ಉದ್ದೇಶದಿಂದ ಎಂದು ಶಿವಾಜಿ ನಗರದ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ 3 ವರ್ಷ ನಡೆಯುವುದು ಅನುಮಾನ. ಮಕ್ಕಳಿಗೆ ಚಾಕಲೆಟ್ ಕೊಡದೆ ಕಾಡಿಸುವ ಹಾಗೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡಲು ಕಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಹಳ ಗಂಭೀರವಾದ ಪರಿಸ್ಥಿತಿಯಲ್ಲಿ ಶಿವಾಜಿನಗರದ ಜನತೆ ನನ್ನನ್ನು ಕೈ ಹಿಡಿದಿದ್ದಾರೆ. ಉಪಚುನಾವಣೆಯಲ್ಲಿ ಆಪರೇಷನ್ ಕಮಲ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರಬಹುದು ಆದ್ರೆ, ಇದು ಉಪಚುನಾವಣೆಗೆ ಮಾತ್ರ ಸಂಬಂಧಿಸಿದ್ದು ಎಂದು ಹೇಳಿದರು.
ನಾವು ಹುಟ್ಟಿಸಿದ ಬಾಂಗ್ಲಾದೇಶದಲ್ಲಿ ಆರ್ಥಿಕ ಸ್ಥಿತಿ ಉತ್ತಮ ಮಟ್ಟದಲ್ಲಿದೆ. ಆದ್ರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ ಎಂದರು.
ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಪ್ರಕಾರ, ಪ್ರತಿ 10 ನಿಮಿಷಕ್ಕೆ 10 ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದ್ದು, ದೇಶದ ಈಗಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ದೂರಿದರು.