ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆಯ ಮೇರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಧಾರ್ಮಿಕ ಕ್ಷೇತ್ರಗಳ ಬಸ್ಗಳನ್ನು ಪುನಃ ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಉಳವಿಗೆ ಒಂದು ಬಸ್ ಹಾಗೂ ಧರ್ಮಸ್ಥಳಕ್ಕೆ ಎರಡು ಬಸ್ಗಳನ್ನು ಬಿಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದರು.
ಈ ಎಲ್ಲ ಬಸ್ಗಳು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಹೊರಡಲಿವೆ. ಉಳವಿಗೆ ಹೋಗುವ ಬಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಧಾರವಾಡ, ಹಳಿಯಾಳ, ದಾಂಡೇಲಿ, ಜೊಯಿಡಾ, ಕುಂಬಾರವಾಡ ಮಾರ್ಗವಾಗಿ ಮಧ್ಯಾಹ್ನ 1-00 ಗಂಟೆಗೆ ಉಳವಿ ತಲುಪಲಿದೆ. ಉಳವಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು, ಅದೇ ಮಾರ್ಗದಲ್ಲಿ ಸಂಜೆ 6.30ಕ್ಕೆ ಹುಬ್ಬಳ್ಳಿ ತಲುಪಲಿದೆ ಎಂದರು.
ಧರ್ಮಸ್ಥಳಕ್ಕೆ ತೆರಳುವ ಬಸ್ ಅಂಕೋಲಾ ಮಾರ್ಗವಾಗಿ ಮತ್ತು ರಾತ್ರಿ ಬಸ್ ಶಿರಸಿ ಮಾರ್ಗವಾಗಿ ಒಟ್ಟು ಎರಡು ಬಸ್ಗಳು ಹೊರಡುತ್ತವೆ. ಹುಬ್ಬಳಿಯಿಂದ ಬೆಳಗ್ಗೆ 7ಗಂಟೆಗೆ ಯಲ್ಲಾಪುರ, ಅಂಕೋಲಾ, ಕುಮಟಾ, ಉಡುಪಿ ಮಾರ್ಗವಾಗಿ ಸಂಜೆ 6.30ಕ್ಕೆ ಧರ್ಮಸ್ಥಳ ತಲುಪುತ್ತದೆ. ಮರುದಿನ ಬೆಳಗ್ಗೆ 5.30ಕ್ಕೆ ಧರ್ಮಸ್ಥಳದಿಂದ ಹೊರಟು, ಸಂಜೆ 4.30ಕ್ಕೆ ಹುಬ್ಬಳ್ಳಿ ತಲುಪುತ್ತದೆ.
ಇನ್ನೂ ಸಂಜೆ 6.15ಕ್ಕೆ ಹುಬ್ಬಳ್ಳಿಯಿಂದ ಹೊರಡುವ ಬಸ್ ಮುಂಡಗೋಡ, ಶಿರಸಿ, ಕುಮಟಾ, ಉಡುಪಿ ಮಾರ್ಗವಾಗಿ ಮರುದಿನ ಬೆಳಗ್ಗೆ 5.30ಕ್ಕೆ ಧರ್ಮಸ್ಥಳ ತಲುಪಲಿದೆ. ಧರ್ಮಸ್ಥಳದಿಂದ ಸಂಜೆ 6.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ಪ್ರಯಾಣಿಕರ ಅವಶ್ಯಕತೆ ಗಮನಿಸಿ ಮುಂದಿನ ದಿನಗಳಲ್ಲಿ ದೂರದ ಮಾರ್ಗಗಳ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.