ಹುಬ್ಬಳ್ಳಿ: ಬಿಆರ್ಟಿಎಸ್ ಬಸ್ ಸಂಚಾರವು ಅವಳಿ ನಗರದ ಸಂಪರ್ಕ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತದೆ. ಇದೀಗ ಈ ಯೋಜನೆಗೆ ರಾಷ್ಟ್ರಮಟ್ಟದ ಸ್ವರ್ಣ ಪ್ರಶಸ್ತಿಗೆ ಆಯ್ಕೆಯಾಗಿರುವು ಒಂದೆಡೆ ಸಂತಸ ತಂದಿದ್ದರೆ, ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.
ಅವಳಿ ನಗರಗಳಿಗೆ ತ್ವರಿತ ಗತಿಯಲ್ಲಿ ಸಾರಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಬಿಆರ್ಟಿಎಸ್ ಯೋಜನೆಯಡಿ ‘ಚಿಗರಿ‘ ಬಸ್ಗಳ ಸಂಚಾರ ಆರಂಭವಾಗಿದೆ. ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಯೋಜನೆ ಅವೈಜ್ಞಾನಿಕವಾಗಿದ್ದು, ಜನರ ಜೀವ ಹಿಂಡುತ್ತಿದೆ. ಇಂತಹ ಯೋಜನೆಗೆ ಈಗ ಭಾರತದ ಪ್ರತಿಷ್ಠಿತ ಸ್ಕಾಚ್ ಸಂಸ್ಥೆ ಪ್ರತಿ ವರ್ಷ ಪ್ರದಾನ ಮಾಡುವ ರಾಷ್ಟ್ರಮಟ್ಟದ ಸ್ವರ್ಣ ಪ್ರಶಸ್ತಿಗೆ ‘ಚಿಗರಿ’ ಹೆಚ್ಡಿಬಿಆರ್ಟಿಎಸ್ ಆಯ್ಕೆಯಾಗಿದೆ.
ಕಳೆದ 2 ತಿಂಗಳಿನಿಂದ ನಡೆದ ರಾಷ್ಟ್ರಮಟ್ಟದ 3 ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಡಿಬಿಆರ್ಟಿಎಸ್ ಆಯ್ಕೆಯಾಗಿದೆ. ವಿವಿಧ ರಾಜ್ಯಗಳಿಂದ ಸ್ವೀಕೃತವಾದ 14 ಉತ್ತಮ ಯೋಜನೆಗಳ ಪೈಕಿ ಹೆಚ್ಡಿಬಿಆರ್ಟಿಎಸ್ ಅತ್ಯುತ್ತಮ ಯೋಜನೆ ಎಂದು ಪರಿಸರ & ಸುಸ್ಥಿರತೆ ವರ್ಗದಡಿಯಲ್ಲಿ ಆಯ್ಕೆಯಾಗಿದೆ.
ಕಡಿಮೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಆದ ಹೆಚ್ಚಳ ಮತ್ತು ಮೆಚ್ಚುಗೆ, ಅತ್ಯಂತ ಕಡಿಮೆ ದರದಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಗುಣಮಟ್ಟದ ಎಸಿ (ಹವಾ ನಿಯಂತ್ರಿತ) ಬಸ್ ಸಂಚಾರ ಸೌಲಭ್ಯ ಕಲ್ಪಿಸುತ್ತಿರುವುದು, ವಾಯು ಮಾಲಿನ್ಯದ ನಿಯಂತ್ರಣ, ಪರಿಸರ ಸಂರಕ್ಷಣೆಯಿಂದಾದ ಲಾಭಗಳು ಮತ್ತು ಯೋಜನೆಯಲ್ಲಿ ಅನುಷ್ಠಾನಗೊಳಿಸಲಾದ ಹಸಿರು ಬಿಆರ್ಟಿಎಸ್ ವ್ಯವಸ್ಥೆಯಾಗಿದೆ. ಪ್ರಯಾಣದ ಅವಧಿಯಲ್ಲಿ ಸಮಯದ ಉಳಿತಾಯ, ಒಂದೇ ಯೋಜನಯಡಿಯಲ್ಲಿ ರಸ್ತೆ, ಬಸ್ ಸೌಲಭ್ಯ, ಬಸ್ ನಿಲ್ದಾಣ, ಐಟಿ, ಸಿಗ್ನಲ್, ನಿಯಂತ್ರಣಾ ಕೊಠಡಿ, ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಪಾದಚಾರಿ ಮಾರ್ಗದಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಕ್ಕೆ ಪ್ರಶಸ್ತಿ ನೀಡಲಾಗಿದೆ.
ಆದ್ರೆ ಈ ಯೋಜನೆಯಿಂದ ಜನರಿಗೆ ಅನಾನುಕೂಲವೇ ಹೆಚ್ಚಾಗಿದೆ ಎಂದು ಸ್ವತಃ ಶಾಸಕ ಅರವಿಂದ ಬೆಲ್ಲದ ಅವರೇ ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರಶಸ್ತಿಗೆ ಆಯ್ಕೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.
150 ವಿವಿಧ ರಾಜ್ಯಗಳಿಂದ ನೂತನ ಯೋಜನೆಗಳು ಅಂತಿಮ ಹಂತದಲ್ಲಿ ಪ್ರವೇಶ ಪಡೆದಿದ್ದು, ಈ ಪೈಕಿ ಪರಿಸರ & ಸುಸ್ಥಿರತೆ ವಿಭಾಗದಲ್ಲಿ ಅಂತಿಮವಾಗಿ ಆಯ್ಕೆಯಾದ 14 ಯೋಜನೆಗಳನ್ನು ಹಿಂದಿಕ್ಕಿ ಅತ್ಯುತ್ತಮ ಯೋಜನೆಗೆ ನೀಡಲಾಗುವ ಸ್ವರ್ಣ ಪ್ರಶಸ್ತಿಯನ್ನು ‘ಚಿಗರಿ’ ತನ್ನದಾಗಿಸಿಕೊಂಡಿದೆ.
ಈ ಸಂಸ್ಥೆ ಕಳೆದ 20 ವರ್ಷದಿಂದ ಪ್ರತಿವರ್ಷ ದೇಶದ ಶ್ರೇಷ್ಠ ಯೋಜನೆಗಳನ್ನು ಆಯ್ಕೆ ಮಾಡಿ 3 ವಿಧಗಳ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ. ಅಸಲಿಗೆ ಈ ಯೋಜನೆ ಯಶಸ್ಸು ಕಂಡಿಲ್ಲ, ಇನ್ನೂ ಹಲವು ಕಡೆಗಳಲ್ಲಿ ಕಳಪೆ ಕಾಮಗಾರಿಯಿಂದ ಸೇತುವೆ ಕುಸಿದು ಬೀಳುತ್ತಿದೆ. ಮಳೆ ಬಂದರೆ ಅವಳಿ ನಗರದ ಸಂಪರ್ಕ ಕಲ್ಪಿಸುವ ಈ ರಸ್ತೆ ಜಲಾವೃತವಾಗಿ ವಾಹನಗಳು ನೀರಿನಲ್ಲಿ ತೇಲಾಡುತ್ತವೆ. ಅರ್ಧ ಗಂಟೆ ಮಳೆ ಸುರಿದರೆ ಸಾಕು ಈ ರಸ್ತೆ ಸಮುದ್ರದಂತಾಗಿ ‘ಚಿಗರಿ’ ಬಸ್ಗಳ ತುಂಬೆಲ್ಲ ನೀರು ತುಂಬಿಕೊಳ್ಳುತ್ತವೆ. ಅವೈಜ್ಞಾನಿಕ ಕ್ರಾಸಿಂಗ್ನಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು ಈಗ ಪ್ರಶಸ್ತಿ ಬಂದಿರುವುದನ್ನು ನೋಡಿ ಜನರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.
ಇದನ್ನೂ ಓದಿ: ಗಟ್ಟಿದ್ವನಿ ಇದ್ದವನು ಒಂಟಿ ಆಗ್ತಾನೆ, ನನ್ನ ಸ್ನೇಹಿತರು ನನ್ನನ್ನು ಒಬ್ಬಂಟಿ ಮಾಡಿದ್ರು: ಹಳ್ಳಿಹಕ್ಕಿ ಬೇಸರ