ಹುಬ್ಬಳ್ಳಿ: ಬಿಜೆಪಿಯ ರಾಷ್ಟ್ರೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಂದು ಜನರನ್ನು ಮೂರ್ಖರನ್ನಾಗಿ ಮಾಡಿ ಹೋಗುತ್ತಾರೆ. ಇಲ್ಲಿಗೆ ಬಂದು ಭಾಷಣ ಮಾಡಿ ಒಡೆದಾಳುವ ನೀತಿ ಅನುಸರಿಸಿ ಹೋಗುತ್ತಾರೆ ಎಂದು ಎಐಸಿಸಿ ರಾಷ್ಟೀಯ ವಕ್ತಾರ ಅಲೋಕ ಶರ್ಮಾ ಹಾಗೂ ರೋಹನ್ ಗುಪ್ತಾ ಹೇಳಿದರು.
ನಗರದಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಬಂದು ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಒಂದೇ ಒಂದು ಶಬ್ದ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದೇ ಒಂದು ಭಾಷಣದಲ್ಲಿ ದೇಶದ ಭದ್ರತೆ ಬಗ್ಗೆ ತಾವು ಕೈಗೊಂಡ ಕ್ರಮಗಳ ಬಗ್ಗೆ ಹೇಳಿಲ್ಲ ಎಂದು ಅಪಾದನೆ ಮಾಡಿದರು.
ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಘೋಷಣೆಯಾದರೆ ಸಾಕು, ದೆಹಲಿಯನ್ನು ಬಿಟ್ಟು ತಿರುಗುತ್ತಾರೆ. ಇವರು ಕೇವಲ ಪ್ರಚಾರ ಮಂತ್ರಿಗಳಾಗಿದ್ದಾರೆ. ತಾವು ಚುನಾವಣೆ ಪೂರ್ವದಲ್ಲಿ ನೀಡಿರುವ ಭರವಸೆಗಳನ್ನು ಎಷ್ಟು ಈಡೇರಿಸಿದ್ದಾರೆ ಎಂಬ ಬಗ್ಗೆ ಒಂದೇ ಒಂದು ಮಾತನ್ನು ಅವರು ಭಾಷಣದಲ್ಲಿ ಹೇಳುವುದಿಲ್ಲ.
ಬದಲಾಗಿ ಜನರ ಜನರ ನಡುವೆ, ರಾಜ್ಯ ರಾಜ್ಯಗಳ ನಡುವೆ ಒಡೆದಾಳುವ ನೀತಿ ಅನುಸರಿಸುತ್ತ ಮತ್ತೆ ಹೋಗಿ ದೆಹಲಿಯಲ್ಲಿ ಕೂರುತ್ತಾರೆ. ಜಾತಿ ಧರ್ಮಗಳ ನಡುವೆ ಕಿಡಿಹೊತ್ತಿಸಿ, ಜನರನ್ನು ಭಾವುಕರಾಗಿ ಮಾಡಿ ಮತಗಳನ್ನು ಧೃವೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರು ಯಾವುದೇ ರಾಜ್ಯಕ್ಕೆ ಹೋಗಲಿ ಜಗಳ ಹಚ್ಚುತ್ತಾರೆ. ಬರೀ ಸುಳ್ಳು ಭರವಸೆ, ಆಶ್ವಾಸನೆ ನೀಡುತ್ತಾರೆ. ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೊದಲು ತಮ್ಮ ರಾಜ್ಯದ ಅಭಿವೃದ್ಧಿ ಮಾಡಲಿ. ಅದನ್ನು ಬಿಟ್ಟು ಇಲ್ಲಿ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಬಂದು ಅವರು ಹನುಮಂತನ ಜಾತಿ ಯಾವುದು ಎಂದು ಭಾಷಣದಲ್ಲಿ ಹೇಳಿದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.
ಇದನ್ನೂಓದಿ:ರಂಗೇರಿದ ಚುನಾವಣಾ ಕಣ: ಬಿಜೆಪಿಯ ಮಹಾ ಅಭಿಯಾನ.. ಅಮಿತ್ ಶಾ ಸೇರಿ 98 ಪ್ರಭಾವಿ ನಾಯಕರಿಂದ ಮತಬೇಟೆ
ಎಐಸಿಸಿ ರಾಷ್ಟ್ರೀಯ ಮಾಧ್ಯಮ ವಕ್ತಾರ ರೋಹನ ಗುಪ್ತಾ ಮಾತನಾಡಿ ಬಿಜೆಪಿಯು ಡಬಲ್ ಎಂಜಿನ್ ಸರ್ಕಾರವಲ್ಲ. ಇದು ಟ್ರಬಲ್ ಎಂಜಿನ್ ಸರ್ಕಾರ. ವಿದ್ಯುತ್ ಸರಬರಾಜು ಹಾಗೂ ಬಹುತೇಕ ಸಾರ್ವಜನಿಕ ಸೇವೆಯಲ್ಲಿ ಜನರಿಗೆ ದೊಡ್ಡ ಅನ್ಯಾಯ ಮಾಡಿದೆ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಮೂಲಸೌಕರ್ಯ ಸಮರ್ಪಕವಾಗಿ ಜನರಿಗೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಖಾಸಗೀಕರಣದ ಹೆಸರಿನಲ್ಲಿ ದೇಶದ ಅರ್ಥವ್ಯವಸ್ಥೆಯ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷದವರು 40% ಕಮೀಷನ್ ಹಾಗೂ ಖಾಸಗೀಕರಣದ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಾರೆ. ನಿರಂತರ ವಿದ್ಯುತ್ ಪವರ್ ಕಟ್ ಮೂಲಕ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕೂಡ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂಓದಿ:ಖರ್ಗೆ ತವರಿನಲ್ಲಿ ಕೈ ಕಟ್ಟಿಹಾಕಲು ಬಿಜೆಪಿ ರಣತಂತ್ರ: ಇಂದು ಕಲಬುರಗಿಗೆ ಅಮಿತ್ ಶಾ ಎಂಟ್ರಿ, ಮಹತ್ವದ ಸಭೆ