ಹುಬ್ಬಳ್ಳಿ: ಈಗಾಗಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಲ್ಲಾಡುತ್ತಿದ್ದು, ಲೋಕಸಭೆ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರಕ್ಕೆ ಯಾವುದೇ ಅಸ್ತಿತ್ವ ಇರಲ್ಲ ಎಂದು ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಹೇಳಿದರು.
ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಎಸ್.ಐ.ಚಿಕ್ಕನಗೌಡರ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಂತ್ಯದ ಬಗ್ಗೆ ಬಿಜೆಪಿ ಹೇಳುತ್ತಿಲ್ಲ. ಬದಲಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಜಿ.ಟಿ.ದೇವೆಗೌಡ ಕೊಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ.ಇವರು ಮಾಡಿಕೊಂಡಿರುವ ಒಡಂಬಡಿಕೆ ಮುರಿದು ಹೋಗಲಿದೆ. ಈಗ ಮಾಡಿಕೊಂಡಿರುವ ಒಪ್ಪಂದ ಪ್ರೀತಿಯ ಮದುವೆ ಅಲ್ಲ. ಬಲವಂತದ ಮದುವೆಯಾಗಿದ್ದು, ಇದು ಲೋಕಸಭೆ ಫಲಿತಾಂಶ ಬರುವವರೆಗೆ ಮಾತ್ರ ಇರಲಿದೆ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿಗೆ ತಾವು ಅಧಿಕಾರಕ್ಕೆ ಬರುತ್ತೇವೆ ಅಂತ ಗೊತ್ತೇ ಇರಲಿಲ್ಲ. ಹೀಗಾಗಿ ಅವರು ಸುಮಾರು 1 ಲಕ್ಷದ 76 ಸಾವಿರ ಕೋಟಿ ರೂ.ಆಶ್ವಾಸನೆ ಕೊಟ್ಟಿದ್ದಾರೆ. ಅದರಲ್ಲಿ ಹಿರಿಯ ನಾಗರಿಕರಿಗೆ, ಗರ್ಭಿಣಿಯವರಿಗೆ ತಿಂಗಳಿಗೆ 6 ಸಾವಿರ ಕೊಡುತ್ತೇನೆ ಎಂದಿದ್ದಾರೆ. ಅದು ಕೊಡುವುದು ಅಸಾಧ್ಯ. ಆದರೆ ಮೈತ್ರಿ ಸರ್ಕಾರದ ಬಜೆಟ್ 2 ಲಕ್ಷದ 36 ಸಾವಿರ ಕೋಟಿ. ಇದರಲ್ಲಿ ಶೇ.50ರಷ್ಟು ಸಂಬಳಕ್ಕೆ ಹೋಗುವುದು. ಉಳಿದ 1 ಲಕ್ಷ 36 ಸಾವಿರ ಕೋಟಿಯಲ್ಲಿ 46 ಸಾವಿರ ಕೋಟಿ ಡಿಪಾಸಿಟ್ ಇದೆ. 40 ಸಾವಿರ ಕೋಟಿ ಸಾಲ ಮಾಡುವುದಾಗಿ ಹೇಳಿದ್ದಾರೆ. ಸರಿಯಾಗಿ 82 ಸಾವಿರ ಕೋಟಿ ಕೂಡ ಸರ್ಕಾರದ ಬೊಕ್ಕಸದಲ್ಲಿಲ್ಲ. ಇನ್ನೂ ಉಳಿದ 33 ಸಾವಿರ ಕೋಟಿಯಲ್ಲಿ ಸರ್ಕಾರ ಬಜೆಟ್ನಲ್ಲಿದ್ದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಅದರ ಜೊತೆಗೆ ಕುಮಾರಸ್ವಾಮಿ ತಂದ 1ಲಕ್ಷ 76 ಸಾವಿರ ಕೋಟಿ ಯೋಜನೆಯನ್ನು ಮಾಡಬೇಕು. ಆದರೆ ಇದನ್ನು ಮಾಡುವುದು ಅಸಾಧ್ಯ.
ಈ ಕಾರಣಗಳಿಂದಲೇ ಕಾಂಗ್ರೆಸ್ ಏನಾದರೂ ಜಗಳ ತೆಗೆದರೇ ಸ್ವತಃ ಕುಮಾರಸ್ವಾಮಿಯವರು ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಮೈತ್ರಿಯ ಒಳಸಂಘರ್ಷದಿಂದ ಸರ್ಕಾರ ಅಂತ್ಯಗೊಂಡು ಮೇ.23ರ ಬಳಿಕ ಬಿಜೆಪಿ ಸರ್ಕಾರ ಸ್ಥಾಪನೆಗೊಳಲಿದೆ ಎಂದು ಭವಿಷ್ಯದ ನುಡಿದರು.