ಧಾರವಾಡ: ಬಹುವಾರ್ಷಿಕ ಹಣ್ಣಿನ ಬೆಳೆಗಳು ಮತ್ತು ಪ್ಲಾಂಟೇಶನ್ ಬೆಳೆಗಳನ್ನು ಅನಿಶ್ಚಿತ ಮಳೆಯಿಂದ ಸಂರಕ್ಷಿಸಲು ಹಾಗೂ ಮಳೆಯಾಶ್ರಿತ ವಾರ್ಷಿಕ ತರಕಾರಿ, ಸಾಂಬಾರು ಮತ್ತು ಹೂವಿನ ಬೆಳೆಗಳ ಕೃಷಿಯು ತಡವಾದಲ್ಲಿ ಸಾಮಾನ್ಯ ನಿರ್ವಹಣಾ ಹಾಗೂ ಕೃಷಿ ಕ್ರಮಗಳನ್ನು ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯು ಕೆಲವು ಸಲಹೆಗಳನ್ನು ನೀಡಿದೆ.
ಬಹುವಾರ್ಷಿಕ ಬೆಳೆಗಳಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿರ್ವಹಣಾ ಕ್ರಮಗಳು:
1. ಗಿಡದ ಬುಡದ ಮಣ್ಣಿನ ಮೇಲೆ ತ್ಯಾಜ್ಯ ವಸ್ತು ಅಥವಾ ಪ್ಲಾಸ್ಟಿಕ್ ಹಾಳೆಯಿಂದ ಹೊದಿಕೆ ಮಾಡುವುದು. ಭೂಮಿಯ ನೀರು ಅವಿಯಾಗುವುದನ್ನು ಕಡಿಮೆ ಮಾಡಿ ತೇವಾಂಶ ಸಂರಕ್ಷಣೆ, ಕಳೆಗಳ ನಿಯಂತ್ರಣ ಹಾಗೂ ಮಣ್ಣಿನ ಉಷ್ಣಾಂಶವನ್ನು ಕಡಿಮೆ ಮಾಡಲು ಒಣಹುಲ್ಲು, ತರಗೆಲೆ ಅಥವಾ ಸ್ಥಳೀಯವಾಗಿ ಸಿಗುವಂತಹ ತ್ಯಾಜ್ಯ ವಸ್ತುಗಳನ್ನು ಸುಮಾರು 5 ಸೆಂ.ಮೀ. ದಪ್ಪವಾಗಿ ಗಿಡದ ಬುಡ ಭಾಗದಲ್ಲಿ 1 ರಿಂದ 2 ಮೀ. ಸುತ್ತಲೂ ಮಣ್ಣಿನ ಮೇಲೆ ಹೊದಿಸಬೇಕು.
2.ಸಾವಯವ ವಸ್ತುಗಳ ಬಳಕೆ ಇಂಗು ಗುಂಡಿಗಳ ನಿರ್ಮಾಣ: ಇಂಗು ಗುಂಡಿಗಳನ್ನು ಬೆಳೆಯ ಅಂತರಕ್ಕೆ ಅನುಗುಣವಾಗಿ ಸಾಲಿನ ಮಧ್ಯಂತರದಲ್ಲಿ 1 ಅಡಿ ಅಗಲ ಮತ್ತು 2 ಅಡಿ ಉದ್ದ ಅಳತೆಯಲ್ಲಿ ನಿರ್ಮಿಸುವುದರಿಂದ ಮಳೆಯ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲು ಮಾಡಬಹುದು.
3.ಮಣ್ಣಿನ ಸಾವಯವ ಅಂಶಗಳನ್ನು ಹೆಚ್ಚಿಸಲು ಬೆಳೆ ತ್ಯಾಜ್ಯಗಳು, ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಎರೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಸಾವಯವ ಅಂಶ ಹೆಚ್ಚುವುದಲ್ಲದೆ ಮಣ್ಣಿನ ರಚನೆ ಸುಧಾರಿಸಿ, ನೀರು ಹಿಡಿಯುವ ಸಾಮರ್ಥ್ಯ ವೃದ್ಧಿಯಾಗುವುದು ಹಾಗೂ ಫಲವತ್ತತೆ ಹೆಚ್ಚಾಗುವುದು.
4.ಕಿರು ಜಲಾನಯನ ಪ್ರದೇಶಗಳನ್ನಾಗಿ ಮಾರ್ಪಡಿಸುವುದು: ಪ್ರತಿಯೊಂದು ಮರಕ್ಕೂ ಒಂದು ಸಣ್ಣ ಜಲಾನಯನ (ಪಾತಿ) ನಿರ್ಮಿಸಿ ಅದರಲ್ಲಿ ನೀರನ್ನು ಹಿಡಿದಿಡಬೇಕು. ಈ ಕಿರು ಜಲಾನಯನ ಪ್ರದೇಶವನ್ನು ಭೂಮಿಯ ಇಳಿಜಾರು, ಬೆಳೆಗಳಿಗೆ ನೀರಿನ ಅವಶ್ಯಕತೆ, ಹರಿಯುವ ವೇಗ ಮತ್ತು ಮರ ಹರಡುವ ವಿಸ್ತಾರ ಇವುಗಳ ಆಧಾರದ ಮೇಲೆ ಲೆಕ್ಕಾಚಾರವಾಗಿ ಅರ್ಧ ಚಂದ್ರಾಕಾರದ ಬದುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಿ ಮೇಲ್ಭಾಗದಲ್ಲಿ ನೀರು ನಿಲ್ಲುವಂತೆ ಮಾಡಬೇಕು.
5.ನೆರಳನ್ನು ಒದಗಿಸುವಿಕೆ: ಹೊಸದಾಗಿ ನಾಟಿ ಮಾಡಿದ ಗಿಡಗಳಿಗೆ ಎಲೆ ಒತ್ತಾಗಿರುವ ಮರದ ರೆಂಬೆಗಳನ್ನು ಅಥವಾ ತೆಂಗಿನ ಗರಿಯ ಬುಡದ ಭಾಗವನ್ನು ನೆಟ್ಟು ನೆರಳನ್ನು ಒದಗಿಸುವುದರಿಂದ ಬಿಸಿಲಿನ ತಾಪ ಕಡಿಮೆಯಾಗಿ, ಗಿಡಕ್ಕೆ ರಕ್ಷಣೆ ಕೊಟ್ಟಂತಾಗುತ್ತದೆ.
6.ಹನಿ ನೀರಾವರಿ ಪದ್ಧತಿ ಅಳವಡಿಕೆ: ನೀರು ಲಭ್ಯವಿದ್ದಲ್ಲಿ ಹನಿ ನೀರಾವರಿ ಅನುಸರಿಸುವುದರಿಂದ ನೀರಿನ ಬಳಕೆಯಲ್ಲಿ ಶೇ. 40-60 ರಷ್ಟು ಉಳಿತಾಯವಾಗುತ್ತದೆ.
7.ಗಾಳಿ ತಡೆ ನಿರ್ಮಿಸುವಿಕೆ: ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಎತ್ತರವಾಗಿ ಬೆಳೆಯುವ ಸರ್ವೇ ಮರ, ಸಿಲ್ವರ್, ಸಾಗುವನಿ, ಬೇವು, ಹಲಸು, ಸಿಮಾರೋಬ ಮುಂತಾದ ಗಿಡಗಳ ಮಧ್ಯಂತರದಲ್ಲಿ ಹೊಂಗೆ, ಗ್ಲೀರೀಸಿಡಿಯ, ನುಗ್ಗೆ, ಔಡಲ ಮೊದಲಾದವುಗಳನ್ನು ಬೆಳೆಸುವುದರಿಂದ ವೇಗವಾಗಿ ಬೀಸುವ ಗಾಳಿಗೆ ತಡೆಯುಂಟಾಗಿ ತೋಟದಲ್ಲಿರುವ ಗಿಡಗಳಿಗೆ ತೊಂದರೆಯಾಗುವುದಿಲ್ಲ. ಇದಲ್ಲದೆ ಹೆಚ್ಚಿನ ಉಷ್ಣಾಂಶವನ್ನು ಹೀರಿಕೊಂಡು ತಂಪು ವಾತಾವರಣ ಉಂಟಾಗುವುದು. ಇದರಿಂದ ತೇವಾಂಶವು ಸಹ ನಿರ್ವಹಣೆಯಾಗುವುದು. ಎರಡು ಸಾಲುಗಳಲ್ಲಿ ಗಾಳಿ ತಡೆ ಮರಗಳನ್ನು ತ್ರಿಕೋನಾಕಾರದಲ್ಲಿ ನೆಟ್ಟು ಬೆಳೆಸುವುದು ಹೆಚ್ಚು ಪರಿಣಾಮಕಾರಿ.
8. ಪೋಷಕಾಂಶಗಳನ್ನು ಎಲೆಗಳ ಮುಖಾಂತರ ಒದಗಿಸುವುದು: ನೀರಿನ ಅಭಾವವಿರುವಂತಹ ಪರಿಸ್ಥಿತಿಯಲ್ಲಿ ಪೋಷಕಾಂಶಗಳನ್ನು ಎಲೆಗಳಿಗೆ ಸಿಂಪಡಿಸುವುದರಿಂದ ಬೆಳೆಯು ಪೋಷಕಾಂಶಗಳನ್ನು ಶೀಘ್ರವಾಗಿ ಹೀರಿಕೊಂಡು ಚೆನ್ನಾಗಿ ಬೆಳೆಯುತ್ತದೆ.
ಇವಿಷ್ಟೇ ಅಲ್ಲದೇ ಜಲಸಂರಕ್ಷಣೆಗೆ ಚೆಕ್ ಡ್ಯಾಂಗಳು, ಕಂಟೂರ ಬಂಡುಗಳು, ಕೃಷಿ ಹೊಂಡಗಳ ನಿರ್ಮಾಣ ಮಾಡಿಕೊಂಡು ಮುಂಗಾರು ಹಂಗಾಮಿನ ಮಳೆಯ ನೀರನ್ನು ಉಳಿಸಿಕೊಂಡು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಬೇಕು. ಹೊಸ ಬೆಳೆಗಳ ಕೃಷಿ ಮಾಡುವಾಗಲೂ ಈ ಅಂಶಗಳನ್ನು ತಪ್ಪದೇ ಅನುಸರಣೆ ಮಾಡುವುದು ಅತ್ಯಗತ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ತಿಳಿಸಿದ್ದಾರೆ.