ಹುಬ್ಬಳ್ಳಿ: ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ಅದು ನಮ್ಮ ಪಕ್ಷದ ವರಿಷ್ಠರು ಮತ್ತು ದೇವೇಗೌಡರ ನಡುವೆ ಇರುವ ಮಾತುಕತೆ. ಈಗಾಗಲೇ ಕುಮಾರಸ್ವಾಮಿಯವರು ಕೆಲವೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆಗಳ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಇದೇ ವೇಳೆ ನಾಳೆ ನಡೆಯಲಿರುವ ಪ್ರತಿಪಕ್ಷಗಳ ಸಭೆಯ ಕುರಿತು ಪ್ರತಿಕ್ರಿಯಿಸಿ, ಯಾವುದೇ ಪ್ರತಿಪಕ್ಷಗಳು ಅಖಿಲ ಭಾರತದಲ್ಲಿ ಶಕ್ತಿಯುತವಾಗಿಲ್ಲ. ನಮ್ಮಲ್ಲಿ ಪ್ರಾದೇಶಿಕ ಪಕ್ಷಗಳೇ ಜಾಸ್ತಿ ಇವೆ. ಅವುಗಳೆಲ್ಲ ರಾಜ್ಯದ ಪ್ರತಿಪಕ್ಷಗಳಾಗಿವೆ. ಹೀಗಾಗಿ ಪ್ರತಿಪಕ್ಷಗಳ ಒಕ್ಕೂಟ ರಚನೆ, ಸಭೆಗಳಿಗೆ ಯಾವುದೇ ರೀತಿಯ ರಾಜಕೀಯ ಅರ್ಥವಿಲ್ಲ. ನಾಳೆ ನಡೆಯುವ ಪ್ರತಿಪಕ್ಷಗಳ ಸಭೆಯಿಂದ ಯಾವುದೇ ರಾಜಕೀಯ ಲಾಭವಾಗದು ಎಂದು ಟೀಕಿಸಿದರು.
ಮೋದಿಯವರು, ಬಿಜೆಪಿಯನ್ನು ಸೋಲಿಸಬೇಕೆನ್ನುವ ಒಂದೇ ಒಂದು ಕಾರಣದಿಂದ ಅವರೆಲ್ಲ ಒಗ್ಗಟ್ಟಾಗುತ್ತಿದ್ದಾರೆ. ಅವರಿಗೆ ಸ್ವಂತ ಬಲ ಇಲ್ಲ ಎನ್ನುವುದು ಇದರಿಂದ ಸ್ಪಷ್ಟ. ಅವರಲ್ಲಿ ಒಂದುಗೂಡುವ ಸಲುವಾಗಿ ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಇಲ್ಲ. ಕೇವಲ ಮೋದಿಯವರನ್ನು ಸೋಲಿಸುಬೇಕೆನ್ನುವ ಕಾರಣವಿದೆ ಅಷ್ಟೇ ಎಂದರು.
ಇದೇ ವೇಳೆ, ವಿಪಕ್ಷ ಸ್ಥಾನ ಜುಲೈ 18ರ ನಂತರ ಘೋಷಣೆ ಆಗಬಹುದು ಎಂಬ ಮಾಹಿತಿ ಇದೆ ಎಂದರು. ಇನ್ನೊಂದೆಡೆ, ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಕೇವಲ ಉಹಾಪೋಹ ಎಂದು ತಿಳಿಸಿದರು.
ಗೃಹಲಕ್ಷ್ಮಿ ದೊಡ್ಡ ಭಾರ: ಗೃಹ ಲಕ್ಷ್ಮಿ ಈಗಾಗಲೇ ಎಡವಟ್ಟಾಗಿದೆ. ದಿನಾಂಕದ ಮೇಲೆ ದಿನಾಂಕ ಮುಂದೂಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಯಾವುದೇ ನಿರ್ದಿಷ್ಟವಾದ ನಿಯಮಗಳನ್ನು ಮಾಡುತ್ತಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ ಬೇಕು ಎನ್ನುತ್ತಾರೆ, ಬ್ಯಾಂಕ್ ಅಕೌಂಟ್ ಇಲ್ಲದೇ ಆಧಾರ್ ಇರುವುದಿಲ್ಲ. ಅತಿ ದೊಡ್ಡ ಭಾರವಾಗಿರುವ ಗೃಹ ಲಕ್ಷ್ಮಿಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಹೀಗಾಗಿ ದಿನಾಂಕ ಮುಂದೂಡಿ, ಕೆಲವೇ ಸಮಯದಲ್ಲಿ ಕೆಲವೇ ಜನರಿಗೆ, ಗೃಹಲಕ್ಷ್ಮಿಯನ್ನು ಪ್ರಾರಂಭ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮಮತಾ, ಔತಣಕೂಟಕ್ಕೆ ಗೈರು..