ಹುಬ್ಬಳ್ಳಿ: ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಲಿಂಗಾಯತ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಸವಾಲೆಸೆದಿದ್ದಾರೆ. ನಗರದಲ್ಲಿಂದು ಮಾತನಾಡಿದ ಬಸನಗೌಡ, ಲಿಂಗಾಯುತ ವಿಚಾರ ಮಾತನಾಡುತ್ತ ಶಾಸಕ ಬಸನಗೌಡ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಲಿಂಗಾಯತ ಜಪ ಮಾಡುತ್ತಿರುವುದು ಕಾಂಗ್ರೆಸ್, ಅವರಿಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಬಂದಿದೆ. ಕಾಂಗ್ರೆಸ್ನವರಿಗೆ ಧಮ್ ಇದ್ದರೆ ಲಿಂಗಾಯತ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು. ನಮ್ಮ ಸಮುದಾಯಕ್ಕೆ ಎಲ್ಲ ಸೌಲಭ್ಯ ಸಿಕ್ಕಿದೆ, ಹೀಗಾಗಿ ಬಿಜೆಪಿ ಪರವಾಗಿದೆ. ಲಿಂಗಾಯತರಿಗೆ ಕೊಟ್ಟಿರುವ 2D ಮೀಸಲಾತಿ ಯಾವತ್ತೂ ತೆಗೆದುಹಾಕಲು ಆಗುವುದಿಲ್ಲ. ಸಿದ್ದರಾಮಯ್ಯರಿಂದ ಲಿಂಗಾಯತ ಸಮಾಜಕ್ಕೆ ನ್ಯಾಯ ಕೊಡಲು ಸಾಧ್ಯವೇ ಇಲ್ಲ ಎಂದರು.
ವ್ಯಾರಂಟಿ ಕಳೆದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗೆ ಬೆಲೆ ಇಲ್ಲ: ಮುಂದುವರೆದು, ಬಿಜೆಪಿ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಭರವಸೆಯನ್ನು ನೆರವೇರಿಸುತ್ತೇವೆ. ಆದರೆ ಕಾಂಗ್ರೆಸ್ನಂತೆ ನಾವು ಗ್ಯಾರಂಟಿ ಕಾರ್ಡ್ ನೀಡುವುದಿಲ್ಲ. ವಾರೆಂಟಿ ಮುಗಿದ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ನ್ನು ಜನ ನಂಬುವುದಿಲ್ಲ ಅದಕ್ಕೆ ಬೆಲೆ ಇಲ್ಲ. ಕಾಂಗ್ರೆಸ್ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನತೆಗೆ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನು ಸಿದ್ದರಾಮಯ್ಯ ಇಡೀ ಲಿಂಗಾಯತರೇ ಭ್ರಷ್ಟರು ಅಂತ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣಾ ಸಮಯದಲ್ಲಿ ಒಂದು ಸಮುದಾಯದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ: ಜಗದೀಶ್ ಶೆಟ್ಟರ್‌ಗೆ ಪಕ್ಷ ಏನೂ ಕಡಿಮೆ ಮಾಡಿಲಿಲ್ಲಾ, ಎಲ್ಲಾ ಕೊಟ್ಟಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಜೀವನದಲ್ಲಿಯೇ ಅವರು ಮಾಡಿದ ದೊಡ್ಡ ತಪ್ಪು. ಅವರು ಯಾರ ಸಲಹೆ ಕೇಳಿ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆಂಬುದು ಗೊತ್ತಿಲ್ಲ ಎಂದರು. ಹಾಗೆ, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟರೆ ಲಿಂಗಾಯತರಿಗೆ ಹೇಗೆ ಅನ್ಯಾಯವಾಗುತ್ತೆ?, ಜಗದೀಶ್ ಶೆಟ್ಟರ್ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದರೆ ನನಗೇನು ವ್ಯತ್ಯಾಸವಾಗುವುದಿಲ್ಲ.
ಈ ಹಿಂದೆ ಕೂಡ ಶೆಟ್ಟರ್ ನನ್ನ ವಿರುದ್ಧ ಪ್ರಚಾರ ಮಾಡಿದರೂ ಪಕ್ಷೇತರವಾಗಿ ಗೆದ್ದು ಬಂದಿದ್ದೇನೆ. ನಾನು ಸ್ವಲ್ಪ ಸ್ಟ್ರೇಟ್ ಫಾರ್ವರ್ಡ್, ಭ್ರಷ್ಟಾಚಾರ ವಿರೋಧಿ, ಕುಟುಂಬ ರಾಜಕೀಯದ ವಿರೋಧಿ. ನಾನು ಹಿಂದುತ್ವದ ಪರವಾಗಿ ಗಟ್ಟಿಯಾಗಿ ಮಾತಾನಾಡುತ್ತೇನೆ. ಹಿಂದುತ್ವ ವಿಚಾರ ಬಂದಾಗ ಬೊಮ್ಮಾಯಿಯವರ ವಿರುದ್ಧವೂ ಮಾತಾನಾಡಿದ್ದೇನೆ. ಹಿಂದುತ್ವ ಶೆಟ್ಟರ್‌ಗೆ ಎಲ್ಲಾ ಅವಕಾಶ ಕೊಟ್ಟಿದೆ, ಅವರು ಹಿಂದುತ್ವದ ಪರವಾಗಿ ಯಾವಾಗ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಕುಮಾರಸ್ವಾಮಿಯವರ ಮನೆಯೇ ಶುದ್ದವಿಲ್ಲ, ಅವರು ಬಿಜೆಪಿಯ ಬಗ್ಗೆ ಚಿಂತೆ ಮಾಡುವುದು ಬೇಡ. ನಿಮ್ಮ ಮನೆಯ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಸತ್ತು ಬಿದ್ದಿದೆ, ಅದನ್ನು ನೋಡುವುದು ಬಿಟ್ಟು ನಮ್ಮ ತಟ್ಟೆಯಲ್ಲಿ ಬಿದ್ದಿರುವ ನೊಣವನ್ನು ಯಾಕೆ ನೋಡಿ ಮಾತನಾಡುತ್ತೀರಿ ಎಂದರು. ಅಲ್ಲದೆ ಕುಮಾರಸ್ವಾಮಿಯವರಿಗೆ ಲಿಂಗಾಯತರ ಮೇಲೆ ಯಾವುದೇ ಗೌರವಿಲ್ಲ. ಅವರು ಯಾವುದೇ ಲಿಂಗಾಯತರ ನಾಯಕರನ್ನು ಬೆಳಸಿಲ್ಲ. ಕುಮಾರಸ್ವಾಮಿಯವರು ಕುರುಬರಿಗೂ ಒಳ್ಳೆದು ಮಾಡಲಿಲ್ಲ, ದಲಿತರಿಗೂ ಒಳ್ಳೆದು ಮಾಡಲಿಲ್ಲಾ ಎಂದು ಆರೋಪಿಸಿದರು.
ಕುಮಾರಸ್ವಾಮಿಯವರು ಒಮ್ಮೆ ದಲಿತರನ್ನು ಸಿಎಂ ಮಾಡುತ್ತೇವೆ ಎಂದು ಹೇಳಿದ್ದಾರೆ, ಇನ್ನೊಮ್ಮೆ ಮುಸ್ಲಿಂ ಅವರನ್ನು ಸಿಎಂ ಮಾಡುತ್ತೇನೆ ಎಂದು. ಈಗ ನೋಡಿದರೇ ನಾನೆ ರಾಜ್ಯದ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಹಾಗಾಗಿ ಅವರು ರಾಜ್ಯ ರಾಜಕೀಯದಲ್ಲಿ ಅಪ್ರಸ್ತುತ ಎಂದು ಟೀಕಿಸಿದರು. ಮುಂದುವರೆದು, ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ನಮಗೆ ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ ಎಂದರು. ಹಾಗೆ ನಾನು ಸಿಎಂ ಅಭ್ಯರ್ಥಿಯಲ್ಲ, ಮಂತ್ರಿ ಆಕಾಂಕ್ಷಿಯಲ್ಲ. ಪಕ್ಷ ಯಾರನ್ನೇ ಮುಖ್ಯಮಂತ್ರಿ ಮಾಡಲಿ, ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ತಮ್ಮ ನಿರ್ಧಾರದ ಬಗ್ಗೆ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಪಾಕ್ ಧ್ವಜವಿದ್ದ ಕರಪತ್ರ ವೈರಲ್: ಪೊಲೀಸರಿಗೆ ದೂರು