ಹುಬ್ಬಳ್ಳಿ: ನಾನು ಕಾಡಿಬೇಡಿ, ಟೈಯರ್ ಸುಟ್ಟು ಮಂತ್ರಿ ಆಗುವ ವ್ಯಕ್ತಿ ಅಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಾ ಇತ್ತು. ಈಗ ನಾಯಕತ್ವ ಬದಲಾವಣೆ ಆಗಿದೆ.
ನೋಡಿ ಒಬ್ಬ ನಾಯಕ ತನ್ನದೇ ಚಾಪು ಇಟ್ಟುಕೊಳ್ಳಬೇಕು. ಬೊಮ್ಮಾಯಿ ಅವರು ಬಿಎಸ್ವೈ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಟೈಂ ಕೊಡಿ. ಅವರು ಬಿಎಸ್ವೈ ರಬ್ಬರ್ ಸ್ಟಾಂಪ್ ಆಗಲ್ಲ ಎಂದರು.
ಹಿಂದೂ ವಿರೋಧಿ ಸಿಎಂ ಆಗಿದ್ದಾರೆ. ಆ ನೋವು ಕಾರ್ಯಕರ್ತರಲ್ಲೂ ಇದೆ. ಯಾರು ಹಿಂದೆ ಹೊಡಿಸಿದ್ರು, ಯಾರು ಹೊಡೆತ ತಿಂದರೂ ಅನ್ನೋದು ಎಲ್ಲರಿಗೂ ಗೊತ್ತಿದೆ. ಪಕ್ಷಕ್ಕೆ ಹಾನಿ ಅಗಬಾರದು ಅಂತಾ ಹೈಕಮಾಂಡ್ ನಿರ್ಣಯ ಕೈಗೊಂಡಿದೆ ಎಂದರು. ಹಿಂದೆ ಎಷ್ಟೋ ಜನ ಕಮ್ಯುನಿಸ್ಟ್ ಇದ್ದವರು ಬಿಜೆಪಿಗೆ ಬಂದಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಜೀರೋದಿಂದ ಹೀರೋ ಆದವನು: ಹಿಂದೆ ಮೂರು ಜನ ಡಿಸಿಎಂ ಆಗಿದ್ರು. ಅವರು ನಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯುತ್ತೆ ಅಂತಿದ್ರು. ಈಗ ಡಿಸಿಎಂ ಸ್ಥಾನವೇ ಇಲ್ಲ ಎಂದು ವ್ಯಂಗ್ಯವಾಡಿದ ಅವರು, ನಾನು ಜೀರೋ ದಿಂದ ಹೀರೋ ಆದವನು. ಹಿಂದೆ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ ಎಂದು ತಿಳಿಸಿದರು.
ದೆಹಲಿಯಲ್ಲಿ ಶಾಸಕರ ಲಾಭಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮಂತ್ರಿ ಸ್ಥಾನಕ್ಕೆ ಲಾಭಿ ನಡೆಸುವುದು ಸರಿಯಲ್ಲ. ಸೂತ್ರಧಾರರೊಬ್ಬರು ಮಗು ಚಿವುಟಿ, ತೊಟ್ಟಿಲು ತೂಗುತ್ತಿದ್ದಾರೆ. ಈಗ ಸೂತ್ರಧಾರರ ಶಿಷ್ಯರೇ ಜಗಳ ತೆಗೆಯುತ್ತಿದ್ದಾರೆ ಎಂದರು.
ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ: ಸುಮ್ಮನೆ ಜಾರಕಿಹೊಳಿಯವರನ್ನ ಸಿಲುಕಿಸಿ ಮುಗಿಸಿ ಬಿಟ್ಟರು. ಶೆಟ್ಟರ್ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ತ್ಯಾಗಕ್ಕೆ ಅಭಿನಂದನೆ ಸಲ್ಲಿಸುವೆ. ಶೆಟ್ಟರ್ ತ್ಯಾಗದಿಂದ ಪ್ರತಿರೂಪವಾಗಿ ಬೊಮ್ಮಾಯಿ ಬಂದಿದ್ದಾರೆ. ನಮ್ಮನ್ನ ಮಂತ್ರಿನೂ ಮಾಡಲಿಲ್ಲ. ಮಂತ್ರಿ ಮಾಡದಿದ್ದರೂ ದುಃಖ ಇಲ್ಲ. ಬೆಲ್ಲದ ಸಿಎಂ ಆಗುವ ಕನಸು ಕಂಡರು. ಬೆಲ್ಲದ್ ಹೆಗಲ ಮೇಲೆ ಯಾರೋ ಬಂದೂಕು ಇಟ್ಟರು. ಕೆಲವರು ಬಗನಿಗೂಟನೂ ಇಡ್ತಾರೆ. ನನಗೆ ಚೂಟಿದ್ರೆ ನಾನು ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ನನಗೆ ಅನ್ಯಾಯ ಆಗಿಲ್ಲ ಎಂದರು.
ಬಿಎಸ್ವೈ ವಿರುದ್ದ ನಾನು ಮಾತನಾಡಿದ್ದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಅನ್ನಬೇಡಿ. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಅವರು ಸ್ಥಾನ ಕಳೆದುಕೊಂಡರು. ಸೋಮಣ್ಣ ಬೇವಿನಮರದ ಅವರು ಬೊಮ್ಮಾಯಿ ವಿಶ್ವಾಸಘಾತಕ ಅಂತಾ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲಿ ಅಂತಾ ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವೆ ಎಂದರು.
ಕುರ್ಚಿಯ ಮಹಿಮೆ ಹಾಗಿರುತ್ತೆ: ವಿಜಯೇಂದ್ರ ಇನ್ನೂ ಸ್ವಲ್ಪ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆದುಕೊಳ್ಳಿ ಎಲ್ಲವನ್ನೂ ಹೇಳುವೆ. ನನಗೆ ಮಂತ್ರಿ ಸ್ಥಾನ ಸಿಗದಿದ್ದಾಗ ಸ್ವಾಮೀಜಿ ಹೇಳಿಕೆ ಕೊಡುವೆ ಅಂದ್ರು. ಆದ್ರೆ ನಾನೇ ಬೇಡ ಅಂದೆ. ಬಿಎಸ್ವೈ ಮೇಲಿನ ಒತ್ತಡದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಬಿಎಸ್ವೈ ನೆರಳು ಆಗಲ್ಲ. ಯಾಕಂದ್ರೆ ಆ ಕುರ್ಚಿಯ ಮಹಿಮೆ ಹಾಗಿರುತ್ತೆ. ಅವರು ಬಿಎಸ್ವೈ ನೆರಳು ಆಗಿದ್ರೆ. ಯಡಿಯೂರಪ್ಪ ನೇಮಕ ಮಾಡಿದ ಸಿಬ್ಬಂದಿಯೇ ಮುಂದುವರೆಯುತ್ತಿದ್ದರು ಎಂದರು.