ಹುಬ್ಬಳ್ಳಿ: ಸರಳವಾಸ್ತು ಸಂಸ್ಥಾಪಕ ಹಾಗೂ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಉಣಕಲ್ ಬಳಿಯ ಖಾಸಗಿ ಹೊಟೇಲ್ನಲ್ಲಿ ಕಗ್ಗೊಲೆ ಮಾಡಲಾಗಿದ್ದು, ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಖಾಸಗಿ ಹೋಟೆಲ್ನ ರಿಸಪ್ಷನ್ನಲ್ಲಿ ದುಷ್ಕರ್ಮಿಗಳು ಹತ್ಯೆಮಾಡಿದ್ದಾರೆ. ದುಷ್ಕರ್ಮಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಕಾಲಿಗೆ ನಮಸ್ಕರಿಸಿ ಬಳಿಕ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾರೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಗುರೂಜಿಯವರು ರಕ್ತ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸಿನಿಮಾ ಸ್ಟೈಲ್ನಲ್ಲಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯ ಎಸಗಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಓದಿ: ಪ್ರೇಮ ವಿವಾಹ, ರಾಜಕೀಯ ದ್ವೇಷ: ಗ್ರಾ.ಪಂ ಸದಸ್ಯನ ಭೀಕರ ಹತ್ಯೆ
ಚಂದ್ರಶೇಖರ್ ಗುರೂಜಿ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದಾರೆ. ಇವರ ಮೂಲ ಹೆಸರು ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ. ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಪಡೆದು, 1988 ರಲ್ಲಿ ಮುಂಬೈಗೆ ತೆರಳಿ ಅಲ್ಲಿ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದ್ದರು. ನಂತರ ಸಿಂಗಾಪುರಕ್ಕೆ ತೆರಳಿ, ವಾಸ್ತು ಶಾಸ್ತ್ರ ಅಧ್ಯಯನ ಮಾಡಿದ್ದರು.
ಅಧ್ಯಯನದ ಬಳಿಕ ಸಿಂಗಾಪುರದಿಂದ ಪುನಃ ಮುಂಬೈಗೆ ಆಗಮಿಸಿ ಸರಳವಾಸ್ತು ಕಚೇರಿ ಆರಂಭಿಸಿದ್ದರು. ಬಳಿಕ ಬೆಂಗಳೂರು, ಹುಬ್ಬಳ್ಳಿಯಲ್ಲಿ ಸೇರಿದಂತೆ ಹಲವೆಡೆ ಸರಳವಾಸ್ತು ಕಚೇರಿ ತೆರೆದಿದ್ದರು. ಗುರೂಜಿ ಆಗಾಗ ಬಾಗಲಕೋಟೆಗೆ ಬಂದು ಹೋಗುತ್ತಿದ್ದರು.