ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ ಹಾಸ್ಟೆಲ್ ವಾರ್ಡನ್ ಹಲ್ಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ನ ಛಾತ್ರಲಯ ಬಿಸಿಎಂ ಹಾಸ್ಟೆಲ್ನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಯ ಸ್ಥಿತಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.
ಮೂಲತಃ ಹುಬ್ಬಳ್ಳಿಯ ನೇಕಾರನಗರದ ನಿವಾಸಿ ವಿಜಯ ಹಿರೇಮಠ (09) ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ. ಈತ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹಾನಗಲ್ ಛಾತ್ರಲಯ ಬಿಸಿಎಂ ಹಾಸ್ಟೆಲ್ನಲ್ಲಿದ್ದುಕೊಂಡು 4ನೇ ತರಗತಿ ಓದುತ್ತಿದ್ದ.
ಆದರೆ, ಕೆಲವು ದಿನಗಳ ಹಿಂದೆ ಹಾಸ್ಟೆಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಹಾಸ್ಟೆಲ್ ವಾರ್ಡನ್ ಶ್ರವಣಕುಮಾರ ಗುರೂಜಿ ಎಂಬಾತ ವಿಜಯ ಹಿರೇಮಠನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಥಳಿತಕ್ಕೊಳಗಾದ ವಿಜಯನ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದ್ದು, ಇದರಿಂದಾಗಿ ವಿದ್ಯಾರ್ಥಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ವಿದ್ಯಾರ್ಥಿಗೆ ವೈದ್ಯರು ವಿಜಯ ಹಿರೇಮಠನ ಆರೋಗ್ಯದ ಬಗ್ಗೆ ಯಾವುದೇ ಗ್ಯಾರಂಟಿ ನೀಡುತ್ತಿಲ್ಲ ಎಂದು ಪಾಲಕರು ಕಣ್ಣೀರಿಡುತ್ತಿದ್ದಾರೆ.
ತಮ್ಮ ಮಗನ ಪರಿಸ್ಥಿತಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ವಿದ್ಯಾರ್ಥಿಯ ಪಾಲಕರು ಆರೋಪ ಮಾಡಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.