ಧಾರವಾಡ: ಜಿಲ್ಲೆಯಾದ್ಯಂತ ಜೂನ್ ತಿಂಗಳಿನಿಂದ ಅಕ್ಟೋಬರ್ವರೆಗೆ ಸುರಿದ ಮಳೆಯಿಂದಾಗಿ 1,64,154 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ 14,233.81 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿ, ಒಟ್ಟಾರೆಯಾಗಿ 1,78,387.81 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿದೆ.
ಬೆಳೆಹಾನಿಯಾದ ರೈತರ ವಿವರಗಳನ್ನು ಪೋರ್ಟಲ್ನಲ್ಲಿ ದಾಖಲಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 1,11,780 ರೈತರಿಗೆ 199.37 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ಡಿಬಿಟಿ ಮುಖಾಂತರ ರೈತರಿಗೆ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ 15,541 ಫಲಾನುಭವಿಗಳಿಗೆ ರೂ. 27.22 ಕೋಟಿ, ಅಳ್ಳಾವರ ತಾಲೂಕಿನ 1,120 ಫಲಾನುಭವಿಗಳಿಗೆ ರೂ. 1.52 ಕೋಟಿ, ಕಲಘಟಗಿ ತಾಲೂಕಿನ 15,143 ಫಲಾನುಭವಿಗಳಿಗೆ ರೂ. 23.69 ಕೋಟಿ, ಕುಂದಗೋಳ ತಾಲೂಕಿನ 25,796 ಫಲಾನುಭವಿಗಳಿಗೆ ರೂ. 46.49 ಕೋಟಿ, ಹುಬ್ಬಳ್ಳಿ ತಾಲೂಕಿನ 17,574 ಫಲಾನುಭವಿಗಳಿಗೆ ರೂ. 31.92 ಕೋಟಿ, ಹುಬ್ಬಳ್ಳಿ ನಗರ ತಾಲೂಕಿನ 1,931 ಫಲಾನುಭವಿಗಳಿಗೆ ರೂ. 3.47 ಕೋಟಿ, ನವಲಗುಂದ ತಾಲೂಕಿನ 22,757 ಫಲಾನುಭವಿಗಳಿಗೆ ರೂ. 43.03 ಕೋಟಿ, ಅಣ್ಣಿಗೇರಿ 11,918 ಫಲಾನುಭವಿಗಳಿಗೆ ರೂ. 22.03 ಕೋಟಿ, ಒಟ್ಟು 1,11,780 ಫಲಾನುಭವಿಗಳಿಗೆ ರೂ. 199.37 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ; ಬೆಳಗಾವಿಯಲ್ಲಿ ಬೃಹತ್ ಆಟೊಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ: ಸಿಎಂ ಬೊಮ್ಮಾಯಿ ಭರವಸೆ