ಧಾರವಾಡ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಅನ್ನದಾತರಿಗೆ ನೆರವಾಗಲು ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ಅಗ್ರಿ ವಾರ್ ರೂಮ್ ಸ್ಥಾಪಿಸಿದೆ.
ರೈತರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕಳೆದ ವರ್ಷದ ಕೊರೊನಾ ಮೊದಲನೇ ಅಲೆ ವೇಳೆಯಲ್ಲಿ ಸ್ಥಾಪಿಸಿದ ಅಗ್ರಿ ವಾರ್ ರೂಮ್ ಈ ವರ್ಷದ ಲಾಕ್ಡೌನ್ ವೇಳೆಯಲ್ಲಿಯೂ ಕೃಷಿ ವಿವಿ ಮುಂದುವರೆಸಿದೆ.
ಕೋವಿಡ್ ಮೊದಲನೇ ಅಲೆಯಲ್ಲಿ ಈ ವಾರ್ ರೂಮ್ ರೈತರಿಗೆ ನೆರವಾಗಿತ್ತು. ಹಂತ ಹಂತವಾಗಿ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿಕೊಂಡು ಬಂದ್ರು ಸಹ ಕೃಷಿ ವಿವಿ ವಾರ್ ರೂಮ್ ಕೆಲಸ ನಿಲ್ಲಿಸಿಲ್ಲ. ಮೊದಲನೇ ಅಲೆ ವೈರಸ್ ಭೀತಿಯಲ್ಲಿ ವಾರ್ ರೂಮ್ ನಿಂದ ರೈತರು ಸಾಕಷ್ಟು ಲಾಭ ಪಡೆದುಕೊಂಡಿದ್ದರು. ತಮ್ಮಗೆ ಬೇಕಾದ ಮಾಹಿತಿ ಪಡೆದುಕೊಂಡು ಅದನ್ನು ಯಥಾವತ್ತಾಗಿ ಅನುಸರಿಸಿ ಲಾಭ ಮಾಡಿಕೊಂಡಿದ್ದರು.
ಮೊದಲನೇ ಅಲೆಯಲ್ಲಿ ದಿನಕ್ಕೆ ಸುಮಾರು 60-79 ಕರೆಗಳು ಬರುತ್ತಿದ್ದವು. ಇದೀಗ ಎರಡನೇ ಅಲೆಯಲ್ಲಿ 10-15 ಕರೆಗಳು ಮಾತ್ರ ಬರುತ್ತಿವೆ. ಮುಂಗಾರು ಬಿತ್ತನೆ ಪ್ರಾರಂಭಗೊಂಡರೆ ಕರೆಗಳು ಬರುವುದು ಹೆಚ್ಚಾಗಬಹುದು ಎಂದು ಕೃಷಿ ವಿವಿ ಕುಲಪತಿ ಎಂ.ಬಿ. ಚೆಟ್ಟಿ ಇಂಗಿತ ವ್ಯಕ್ತಪಡಿಸಿದ್ದಾರೆ.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೆ ನಾಶ ಮಾಡುವ ಬದಲಾಗಿ ಕರೆ ಮಾಡಿ ಸಲಹೆ ಸೂಚನೆ ಪಡೆದು ಮಾರಾಟ ಮಾಡಲು ಈ ವಾರ್ ರೂಮ್ ಅನುಕೂಲವಾಗಿದೆ.