ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿಯು ವಾಹನ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ನಗರದಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸದೇ ಇದ್ದರೂ, ನೋ ಪಾರ್ಕಿಂಗ್ ಹೆಸರಿನಲ್ಲಿ ವಾಹನಗಳನ್ನು ಟೋಯಿಂಗ್ ಮಾಡಿಕೊಂಡು ಹೋಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಚಾಲಕನ ಮೇಲೆ ದಬ್ಬಾಳಿಕೆ ನಡೆಸಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ಲ್ಯಾಮಿಂಗ್ಟನ್ ಶಾಲೆಯ ಎದುರು ವ್ಯಕ್ತಿಯೊಬ್ಬರು ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಬೆಂಗಳೂರಿನಿಂದ ಬಂದ ಸ್ನೇಹಿತರಿಗೆ ಸ್ವೀಟ್ ತರಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಟೋಯಿಂಗ್ ವಾಹನ ಸಿಬ್ಬಂದಿ ಯಾವುದೇ ರೀತಿಯ ಸೂಚನೆ ನೀಡದೆ ಏಕಾಏಕಿ ಬೈಕ್‌ನ ಟೋಯಿಂಗ್ ಮಾಡಿದ್ದಾರೆ.
ಈ ವೇಳೆ ಬೈಕ್ ಚಾಲಕ ಗಾಬರಿಯಿಂದ ಬಂದು ಫುಟ್ಪಾತ್ನ ತಗ್ಗಿನಲ್ಲಿ ಮುಗ್ಗರಿಸಿ ಬಿದ್ದು, ಕೈಗೆ ಗಾಯ ಮಾಡಿಕೊಂಡಿದ್ದಾರೆ. ಪರಿಣಾಮ, ಅಲ್ಲಿದ್ದ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಧವಾ ವೇತನ ಪಡೆಯುತ್ತಿದ್ದ ಪತ್ನಿ ವಿರುದ್ಧ ಪತಿ ದೂರು... ಇಂಥಾ ಹೆಂಡ್ತಿರೂ ಇರ್ತಾರಾ..!
ವಾಣಿಜ್ಯ ನಗರಿಯಲ್ಲಿ ಟೋಯಿಂಗ್ ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ ಮಾಡಲಾಗುತ್ತಿದೆಯೆನ್ನುವ ಮಾತು ಕೇಳಿ ಬರುತ್ತಿವೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿ ದಂಡ ಹಾಕಬೇಕು.
ಆದರೆ, ಪೊಲೀಸರು ಹಾಗೂ ಮಹಾನಗರ ಪಾಲಿಕೆ ದಂಡ ವಸೂಲಿಗೆ ಇಳಿದಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.