ಹುಬ್ಬಳ್ಳಿ: ಸ್ನೇಹಿತನ ಹುಟ್ಟುಹಬ್ಬ ಆಚರಿಸಿ ವಾಪಸ್ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಕ್ರೂಸರ್ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಗಂಗಿ ತಿರುವಿನಲ್ಲಿ ನಡೆದಿದೆ.
ಹನಸಿ ಗ್ರಾಮದ ಮಹಾಂತೇಶ್ ನಿಂಗಪ್ಪ ಗುಜ್ಜಳ (26), ಚಂದ್ರಗೌಡ ಶಿವನಗೌಡ ರಾಯನಗೌಡ (28), ಹೆಬ್ಬಾಳ ಗ್ರಾಮದ ಆನಂದ್ ನಿಂಗಪ್ಪ ಜೆಟ್ಟೆನವರ (26) ಮೃತರು. ಬೈಕ್ನಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದು, ಹನಸಿ ಗ್ರಾಮದ ಆನಂದ ಮಾದರ ಎಂಬಾತ ಅಪಾಯದಿಂದ ಪಾರಾಗಿದ್ದಾನೆ. ನಿನ್ನೆ ರಾತ್ರಿ ಈ ಅವಘಡ ಸಂಭವಿಸಿದೆ.
ದುರಂತದ ಸಂಗತಿಯೆಂದರೆ ಕ್ರೂಸರ್ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಶವ ಸಂಸ್ಕಾರ ಕಾರ್ಯ ಮುಗಿಸಿ ಮರಳಿ ಅಳಗವಾಡಿಗೆ ಬರುತ್ತಿತ್ತು. ಈ ವೇಳೆ ಅಳಗವಾಡಿಯಿಂದ ಹನಸಿ ಗ್ರಾಮಕ್ಕೆ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬದುಕಿ ಬಾಳಬೇಕಿದ್ದ ಯುವಕರು ದುರಂತ ಅಂತ್ಯ ಕಂಡಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.