ಧಾರವಾಡ: ಸಾಗುವಾನಿ ನಾಟಾ ಸಾಗಣೆಯ ಅನುಮತಿಗೆ ಲಂಚ ಪಡೆಯುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗೆ ಅರಣ್ಯ ಇಲಾಖೆ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದ್ದು, ಫಾರೆಸ್ಟರ್ ಎಂ.ಡಿ. ಲಮಾಣಿ, ಗಾರ್ಡ್‌ಗಳಾದ ಅಶೋಕ ಪಾಟೀಲ, ಧರೆಪ್ಪ ಆಳೂರ ಎಂಬ ಮೂವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಕೋಗಿಲಗೇರಿ ಗ್ರಾಮದ ರೈತ ರುದ್ರಪ್ಪ ಮಟಗೇರಿ ಎಂಬುವವರ ಪಾಸ್ ನೀಡಲು ಐದು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸಾಗುವಾನಿ ಕತ್ತರಿಸಿ ಸಾಗಿಸಲು ರೈತ ಪಾಸ್ ಕೇಳಿದ್ದು, ಈ ಸಂದರ್ಭದಲ್ಲಿ ಪಾಸ್ ನೀಡಲು ಅರಣ್ಯ ಸಿಬ್ಬಂದಿ 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿ ವಿರುದ್ಧ ರೈತ ರುದ್ದಪ್ಪ ಎಸಿಬಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮೂವರು ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.