ಧಾರವಾಡ: 2019-20 ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿ ಜಾನಪದ ತಜ್ಞ ಡಾ. ಶ್ರೀಶೈಲ್ ಹುದ್ದಾರ ಹಾಗೂ ಎಮ್.ಎಸ್.ಮಾಳವಾಡ ಅವರಿಗೆ ದೊರೆತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಗೌರವಿಸಿದರು.
ಜಾನಪದ ತಜ್ಞ ಡಾ. ಶ್ರೀಶೈಲ್ ಹುದ್ದಾರ ಅವರಿಗೆ 50 ಸಾವಿರ ರೂ.ಗಳ ಗೌರವಧನ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಿದರೆ, ಎಮ್.ಎಸ್.ಮಾಳವಾಡ ಅವರಿಗೆ 25 ಸಾವಿರ ರೂ.ಗಳ ಗೌರವಧನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬಳಿಕ ಪ್ರಶಸ್ತಿ ಸ್ವೀಕರಿಸಿ ಡಾ. ಶ್ರೀಶೈಲ್ ಹುದ್ದಾರ ಮತ್ತು ಎಮ್.ಎಸ್.ಮಾಳವಾಡ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು.
ಭಾರತದ ಕಲೆ, ಸಾಹಿತ್ಯ, ಪರಂಪರೆಯು ಶ್ರೀಮಂತವಾಗಿದ್ದು, ನಾವು ನಮ್ಮ ಜಾನಪದಕಲೆ, ಸಾಂಸ್ಕೃತಿಗಳನ್ನು ಮರೆತರೆ ನಮ್ಮತನವನ್ನು ಮರೆತಂತೆ ಆಗುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಲು ಯುವಕರು ಆಸಕ್ತಿವಹಿಸಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನವಿ ಮಾಡಿದರು.