ಹುಬ್ಬಳ್ಳಿ: ದಿವಂಗತ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಚಿತ್ರದ ಪ್ರಮೋಷನ್ಗಾಗಿ ಚಿತ್ರ ತಂಡ ಅವಳಿನಗರ ಹುಬ್ಬಳ್ಳಿಗೆ ಆಗಮಿಸಿತ್ತು. ಈ ವೇಳೆ ಬೆದರಿದ ಹೋರಿಯೊಂದು ಅಡ್ಡಾದಿಡ್ಡಿ ಓಡಿ ಆತಂಕ ಸೃಷ್ಟಿಸಿತ್ತು.
ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲು ನಟ ಅಭಿಷೇಕ್ ಹಾಗೂ ಅಭಿಮಾನಿಗಳು ಜಮಾಯಿಸಿದ್ದರು. ಆ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಹೋರಿಯೊಂದು ಜನರ ಮಧ್ಯೆ ಚಿನ್ನಾಟ ಆರಂಭಿಸಿ ಕೆಲವರನ್ನು ಅಟ್ಟಿಸಿಕೊಂಡು ಹೋಯಿತು. ಅಷ್ಟೆ ಅಲ್ಲದೆ ಚೆನ್ನಮ್ಮ ಸರ್ಕಲ್ ಕಟ್ಟೆ ಏರಿ ಗುದ್ದಲು ಮುಂದಾಯಿತು. ಆಗ ಜನರು ಹೋರಿಯಿಂದ ತಪ್ಪಿಸಿಕೊಂಡು ಓಡಾಡಿದರು.
ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಈ ಹೋರಿ ಕಳೆದ ಕೆಲ ದಿನಗಳ ಹಿಂದೆಯೂ ಇದೇ ರೀತಿ ಜನರನ್ನು ಓಡಿಸಿದೆ. ಇಂದು ಕೂಡ ಜನರನ್ನು ಅಟ್ಟಾಡಿಸಿದೆ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.