ಹುಬ್ಬಳ್ಳಿ: ವೈದ್ಯಕೀಯ ಲೋಕದಲ್ಲಿ ದಿನಕ್ಕೊಂದು ಅಚ್ಚರಿಗಳು ಸಂಭವಿಸುವುದು ಸಾಮಾನ್ಯ ಎಂಬಂತಾಗಿದೆ. ಇದೇ ರೀತಿ ಹಿಂದೊಮ್ಮೆ ತಾಯಿಯಾಗಿ ಬಳಿಕ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಇದೀಗ ತಮ್ಮ 43ನೇ ವಸಂತದಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ನಿವಾಸಿಗಳಾದ ಶೋಭಾ ಹಾಗೂ ಚಂದಪ್ಪ ಹಾವೇರಿ ದಂಪತಿ ಇದೀಗ ಮಗು ಪಡೆದ ಸಂಭ್ರಮದಲ್ಲಿದ್ದಾರೆ. ಕಳೆದೊಂದು ವರ್ಷದ ಹಿಂದೆ 18 ವರ್ಷದ ಮಗಳನ್ನು ಅನಾರೋಗ್ಯದಿಂದಾಗಿ ಕಳೆದುಕೊಂಡಿದ್ದರು. ಈ ಘಟನೆಯ ಬಳಿಕ ಮಗು ಇಲ್ಲವೆಂಬ ಕೊರಗು ದಂಪತಿಗೆ ಕಾಡಲಾರಂಭಿಸಿತ್ತು.
ಬಳಿಕ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ್ ದಂಡೆಪ್ಪನವರನ್ನು ಭೇಟಿಯಾಗಿದ್ದಾರೆ. ಅವರು ಮಕ್ಕಳಾಗುವ ಕುರಿತು ಸಲಹೆಗಳನ್ನು ನೀಡಿದ್ದು, ದಂಪತಿ ಚಾಚು ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಒಂದೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ್ದ ಗರ್ಭ ಚೀಲದ ಭಾಗವನ್ನು ಮತ್ತೊಮ್ಮೆ ಯಶಸ್ವಿ ಮರು ಜೋಡಣೆಯಲ್ಲಿ ವೈದ್ಯರು ಯಶಸ್ಸು ಕಂಡಿದ್ದರು.
ಆದರೆ ಇದಾದ ಬಳಿಕವೂ ಮಕ್ಕಳಾಗುವುದು ತುಂಬಾನೆ ವಿರಳವಾಗಿತ್ತು. ಆದರೆ ದಂಪತಿಯ ಆಸೆಯಂತೆ ಕೊನೆಗೂ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಮತ್ತು ತಾಯಿ ಆರೋಗ್ಯವಾಗಿದ್ದು, ಮನೆ ದೀಪ ಬೆಳಗಿಸಿದ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.