ಹುಬ್ಬಳ್ಳಿ: ನಗರದ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾನಗರದ ಪೊಲೀಸರು ಬಂಧಿಸಿ, 5.25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ಕು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಧಾರವಾಡ ಮೂಲದ ವರವಿ ನಾಗಲಾವಿ ದರ್ಗಾ ಓಣಿಯ ನಿಂಗಪ್ಪ ತಡಕೋಡ, ಸನ್ಮತಿ ನಗರದ ಕಲ್ಲಯ್ಯ ಪೂಜಾರ, ಬಳಗಾನೂರ ಗ್ರಾಮದ ಪ್ರಶಾಂತ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 105 ಗ್ರಾಂ ಚಿನ್ನಾಭರಣ, 602 ಗ್ರಾಂ ಬೆಳ್ಳಿ ಆಭರಣ, ಜೊತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಇನ್ಸ್ಪೆಕ್ಟರ್ ಆನಂದ ಒನಕುದ್ರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ನಂತರ ಪೊಲೀಸರು ಆರೋಪಿಗಳನ್ನು ಜಯನಗರದಲ್ಲಿ ಬಂಧಿಸಿ ವಿಚಾರಿಸಿದ ವೇಳೆ ನಗರದಲ್ಲಿ ಎರಡು ಮನೆ ಹಾಗೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಯ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.