ಹುಬ್ಬಳ್ಳಿ: ರಾಜ್ಯದ ಇತರೆ ಸ್ಥಳಗಳಿಂದ ಜಿಲ್ಲೆಗೆ ಆಗಮಿಸಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ಸೇರಿದಂತೆ ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅವರವರ ತವರಿಗೆ ತೆರಳಲು ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಯವರೆಗೆ ಒಟ್ಟು 7 ಬಸ್ಗಳಲ್ಲಿ 198 ಜನರು ತಮ್ಮ ಊರುಗಳಿಗೆ ಮರಳಿದರು. ಬೆಂಗಳೂರು, ಕಲಬುರಗಿ, ಬೀದರ್, ಅಫಜಲಪುರ, ಮಂಗಳೂರು, ರಾಯಚೂರು ಮಾರ್ಗಗಳಲ್ಲಿ ವಿಶೇಷ ಬಸ್ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗಿದೆ.
ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್, ತಹಶೀಲ್ದಾರ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾ.ಕ.ರ.ಸಾ.ಸಂ ಅಧಿಕಾರಿಗಳಾದ ಹೆಚ್.ಆರ್.ರಾಮನಗೌಡರ, ಅಶೋಕ ಪಾಟೀಲ್ ಮತ್ತಿತರರು ಹೊರ ಜಿಲ್ಲೆಗಳ ಪ್ರಯಾಣಿಕರನ್ನು ಕಳುಹಿಸುವ ಕಾರ್ಯನಿರ್ವಹಣೆ ಮಾಡಿದರು. ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ, ನೋಂದಣಿ ಮಾಡಿಕೊಂಡು, ಸಂಪೂರ್ಣ ವಿವರಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.