ಹುಬ್ಬಳ್ಳಿ : ಚಿನ್ನದ ಒಡವೆಗಳನ್ನು ತೊಳೆದುಕೊಡುವ ನೆಪದಲ್ಲಿ ಮಹಿಳೆಗೆ ಕಳ್ಳರು ವಂಚನೆ ಎಸಗಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯಲ್ಲಿ ನಡೆದಿದೆ.
ಮಾಜಿ ಪಾಲಿಕೆ ಸದಸ್ಯ ವಿಷ್ಣುಸಾ ಪವಾರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಸರೋಜಾ ಹಾಗೂ ಸೊಸೆ ಅನಿತಾ ಎಂಬುವರು ಮೋಸಕ್ಕೊಳಗಾಗಿದ್ದಾರೆ. ಉಜಾಲಾ ಪೌಡರ್ ಮಾರಾಟ ಮಾಡಲು ಬಂದಿರುವುದಾಗಿ ನಂಬಿಸಿ ಇಬ್ಬರು ವಂಚಕರು 6 ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ.
ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಅತ್ತೆಯನ್ನು ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ ಒಳಗಡೆ ಕಳುಹಿಸಿದ್ದಾರೆ. ಇದೇ ವೇಳೆ ಚಿನ್ನದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ವಂಚಕರಿಬ್ಬರು ಸುಮಾರು 180 ಗ್ರಾಂ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಂಚಕರ ಚಲನವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಶಿವಾನಂದ ಕಮತಗಿ ಭೇಟಿ ನೀಡಿ ಪರಿಶೀಲಿಸಿದ್ದು, ನಗರದ ವಿವಿಧೆಡೆ ನಾಕಾಬಂದಿ ಹಾಕಿ ಖದೀಮರ ಸೆರೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ ಉನ್ನತ ಶಿಕ್ಷಣ ಇಲಾಖೆ: ಇಲ್ಲಿದೆ ಸಂಪೂರ್ಣ ಮಾಹಿತಿ