ದಾವಣಗೆರೆ: ಒಂಟಿ ಸಲಗವೊಂದು ಕಾಡಿನಿಂದ ನಾಡಿಗೆ ಬಂದು ಯುವತಿಯನ್ನು ಬಲಿ ಪಡೆದಿದ್ದಲ್ಲದೇ, ಆನೆ ದಾಳಿಯಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಾಮುತ್ತ ನಡೆದಿದೆ.
ಆನೆ ದಾಳಿಯಿಂದ ಯುವತಿ ಸಾವು: ಕವನ (17) ಸಾವನ್ನಪ್ಪಿದ ಯುವತಿ. ಜಮೀನಿಗೆ ಎಂದು ತಾಯಿ ಮಂಜುಳಾ (42) ಜೊತೆ ತೆರಳಿದ್ದ ಕವನ ಜಮೀನಿನಲ್ಲಿ ಅವರೆಕಾಯಿ ಬಿಡಿಸುವಾಗ ಹಿಂದಿನಿಂದ ಬಂದ ಆನೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಸಾವನಪ್ಪಿದ್ದಾರೆ. ಇನ್ನು ಗಾಯಗೊಂಡ ತಾಯಿ ಮಂಜುಳಾಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಿನ ಜಾವ 6 ಗಂಟೆ ಸುಮಾರಿಗೆ ಕಾಣಿಸಿಕೊಂಡ ಆನೆ, ಒಬ್ಬ ಮಹಿಳೆ ಹಾಗೂ ದಾವುಜ್ ನಾಯ್ಕ್ ಎನ್ನುವರ ಮೇಲೆ ದಾಳಿ ನಡೆಸಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಗಾಯಗೊಂಡವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಶಿಪುರ, ಸೋಮ್ಲಾಪುರ, ಸೂಳೆಕೆರೆ ಸುತ್ತಮುತ್ತಲು ಓಡಾಡುತ್ತಿದ್ದು, ಆನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹತ್ತಾರು ಗ್ರಾಮದ ಜನರು ಭಯಭೀತರಾಗಿದ್ದಾರೆ. ಇನ್ನು ಯಾರು ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ ಜನರಿಗೆ ಎಚ್ಚರಿಕೆ ನೀಡಿದ್ದು, ಆನೆಯನ್ನು ಕಾಡಿಗಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತವಾಗಿದೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ: ಕಡಬದ ಎಲಿಫಂಟ್ ಆಪರೇಷನ್ ಕಾರ್ಯಾಚರಣೆ ಸ್ಥಗಿತ.. ಭಯದ ಜೊತೆಗೆ ಸಂಕಷ್ಟದಲ್ಲಿ ಜನತೆ
ಒಂಟಿ ಸಲಗದ ದಾಳಿಗೆ ಸಿಆರ್ಪಿಎಫ್ ಬಲಿ: ಬೆಂಗಳೂರಿನ ಬನ್ನೇರುಘಟ್ಟದ ಕಗ್ಗಲೀಪುರ ಮುಖ್ಯರಸ್ತೆಯ ಸಿಆರ್ಪಿಎಫ್ ಡಾಗ್ ಸ್ಕ್ವಾಡ್ ಕೇಂದ್ರದ ಬಳಿ ಸಿಆರ್ಪಿಎಫ್ ಯೋಧನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಹೆಚ್.ಎನ್.ಸಿಂಗ್ (33) ಮೃತರಾಗಿದ್ದು, ಇವರು ಬೆಳಗ್ಗೆ ಸೇನಾ ಕೇಂದ್ರದಲ್ಲಿ ವಾಕಿಂಗ್ ಮತ್ತು ಜಾಗಿಂಗ್ನಲ್ಲಿ ತೊಡಗಿದ್ದರು. ಈ ಸಂದರ್ಭ ಆನೆ ದಾಳಿ ಮಾಡಿದೆ. ಯೋಧ ಹೆಚ್.ಎನ್.ಸಿಂಗ್ ಗಾಯಗಳಿಂದ ನೆಲಕ್ಕೆ ಬಿದ್ದಿರುವುದನ್ನು ಸಹೋದ್ಯೋಗಿಗಳು ಗಮನಿಸಿದ್ದಾರೆ. ಕೂಡಲೇ ತಲಘಟ್ಟಪುರ ಪೊಲೀಸರು ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ಸಾವಿಗೆ ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿತ್ತು.
ದನ ಮೇಯಿಸಲು ಹೋಗಿದ್ದ ರೈತ ಆನೆ ದಾಳಿಗೆ ಸಾವು: ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ಆನೆ ದಾಳಿಗೆ ರೈತ ಸಾವನ್ನಪ್ಪಿದ್ದರು. ಈ ರೈತ ಯಾವಾಗಲು ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದರು. ಆದರೆ, ತಾನು ಸಾಕಿದ್ದ ಹಸು ತಪ್ಪಿಸಿಕೊಂಡಿದ್ದರಿಂದ ಕಾಡಿನಲ್ಲಿ ಹುಡುಕಲು ಹೋಗಿದ್ದವರು ಮನೆಗೆ ವಾಪಾಸಾಗಿರಲಿಲ್ಲ. ಹುಡುಕಾಟ ನಡೆಸಿದರು ರೈತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕೊನೆಗೆ ಅರಣ್ಯ ಸಿಬ್ಬಂದಿಗೆ ಕಾಡಿನಲ್ಲಿ ಬಿಟ್ ಗುಲ್ಲೆಟ್ಟಿ ಕಾವಲ್ ಬಳಿ ರೈತನ ಮೃತದೇಹ ಪತ್ತೆಯಾಗಿತ್ತು.
ಇದನ್ನೂ ಓದಿ:'ಹನಿಟ್ರ್ಯಾಪ್' ಮೂಲಕ ತೀರ್ಥಹಳ್ಳಿ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ