ದಾವಣಗೆರೆ: ಆಸ್ತಿಯ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ನ್ಯಾಯ ಕೊಡಿಸುವಂತೆ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿವಕೊಳೆನೂರು ಗ್ರಾಮದ ವೇದಾವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಆತ್ಮಹತ್ಯೆಗೆ ಯತ್ನಿಸಿದ ವೇದಾವತಿ ಶುಕ್ರವಾರ ಜಿಲ್ಲಾ ಪೊಲೀಸ್ ಕಚೇರಿಗೆ ಆಸ್ತಿಯ ವ್ಯಾಜ್ಯ ವಿಚಾರಕ್ಕಾಗಿ ದೂರು ನೀಡಲು ಆಗಮಿಸಿದ್ದರು. ತನ್ನ ಪತಿಯ ಅಣ್ಣನಾದ ವೆಂಕಟೇಶ ಮತ್ತು ಅವರ ಮನೆಯ ಕಡೆಯವರ ವಿರುದ್ಧ ದೂರು ನೀಡಲು ಬಂದಿದ್ದರು. ಆದರೆ ಎಸ್ಪಿ ಡಾ. ಅರುಣ್ ಕೆ ಅವರನ್ನು ಭೇಟಿಯಾಗಿ ದೂರು ನೀಡುವ ಮುನ್ನವೇ ಕಚೇರಿ ಆವರಣದಲ್ಲಿ ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ತಕ್ಷಣವೇ 112 ವಾಹನದಲ್ಲಿ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಡಾ. ಅರುಣ್ ಕೆ ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೂ ಅವರ ಗಂಡನ ಸಹೋದರ ಹಾಗೂ ಕುಟುಂಬದೊಂದಿಗೆ ಸುಮಾರು 7-8 ವರ್ಷಗಳಿಂದ ಆಸ್ತಿ ವ್ಯಾಜ್ಯ ನಡೆಯುತ್ತಿರುವುದು ತಿಳಿದುಬಂದಿರುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ವೇದಾವತಿಯಿಂದ ದೂರು ಅರ್ಜಿಯನ್ನು ಪಡೆದ ಪೊಲೀಸ್ ಇಲಾಖೆ, ಅದೇ ದೂರು ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಗೆ ರವಾನಿಸಿ ವಿಚಾರಣೆ ಮಾಡುವಂತೆ ಸೂಚಿಸಲಾಗಿದೆ. ಇನ್ನು ವೇದಾವತಿ ನೀಡಿರುವ ದೂರು ಹಿನ್ನೆಲೆಯಲ್ಲಿ ಪರಿಶೀಲಿಸಿ ಕಂದಾಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವನ್ನು ಪಡೆದು ಆ ಬಳಿಕ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ.
ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಲು ಎಸ್ಪಿ ಕಚೇರಿ ಆವರಣಕ್ಕೆ ಬಂದು ವೇದಾವತಿ ವಿಷ ಸೇವಿದ್ದರು. ಆದ್ರೆ ಎಸ್ಪಿ ಡಾ. ಅರುಣ್ ಕೆ ಅವರನ್ನು ಭೇಟಿಯಾಗದೆ ಏಕಾಏಕಿ ವಿಷ ಸೇವನೆ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಸದ್ಯ ವೇದಾವತಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ಎತ್ತುಗಳ ಕಳವು.. ಪೊಲೀಸ್ ದೂರು ನೀಡಿ ಕೊಟ್ಟಿಗೆಯಲ್ಲಿಯೇ ಕುಳಿತ ರೈತ