ದಾವಣಗೆರೆ:ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆಗೈದ ಘಟನೆ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹರಪನಹಳ್ಳಿ ಪಟ್ಟಣದ ಚಂದ್ರಕಲಾ ಹಾಗೂ ಆಕೆಯ ಪ್ರಿಯಕರ ಕಿಂದ್ರಿ ಉಚ್ಚೆಂಗೆಪ್ಪ ಹಾಗೂ ಮೃತದೇಹ ಸಾಗಿಸಲು ಸಹಕರಿಸಿದ ಇಬ್ಬರು ಬಾಲಾಪಾರಾಧಿಗಳನ್ನು ಸೇರಿಸಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹರಪನಹಳ್ಳಿ ಪಟ್ಟಣದ ಇಸ್ಲಾಂಪುರದ ನಿವಾಸಿ ಸುರೇಶನ ಜೊತೆ ಚಂದ್ರಕಲಾಳ ವಿವಾಹವಾಗಿ ಎರಡು ವರ್ಷಗಳು ಗತಿಸಿತ್ತು. ಚಂದ್ರಕಲಾ ಆಕೆಯ ಸಂಬಂಧಿ ಕಿಂದ್ರಿ ಉಚ್ಚೆಂಗೆಪ್ಪನ ಜತೆ ಅಕ್ರಮ ಸಂಬಂಧ ಹೊಂದಿದ್ದು ಪತಿ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದನು.
ಇದರಿಂದ ತಮ್ಮ ಅಕ್ರಮ ಸಂಬಂಧಕ್ಕೆ ತೊಂದರೆಯಾಗಿದ್ದರಿಂದ ಪತಿಯನ್ನು ಕೊಲೆ ಮಾಡಲಾಯಿತು ಎಂದು ಆರೋಪಿಗಳು ಪೊಲೀಸರ ಮುಂದೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಸೆಪ್ಟಂಬರ್ 12ರಂದು ತಡರಾತ್ರಿ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಸುರೇಶನ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಅದೇ ದಿನ ರಾತ್ರಿ ಗೋಣಿಚೀಲ, ಬೆಡ್ ಶೀಟ್‌ಗಳಲ್ಲಿ ಮೃತದೇಹ ಸುತ್ತಿ, ಬೈಕ್ ಮೂಲಕ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಅಂತಾ ಪೊಲೀಸರು ಮಾಹಿತಿ ನೀಡಿದರು.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್ ವರಿಷ್ಠ ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್ ಮಾರ್ಗದರ್ಶನದಲ್ಲಿ ಸಿಪಿಐ ಕೆ. ಕುಮಾರ್, ಪಿಎಸ್ಐ ಕೆ.ಶ್ರೀಧರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮೃತ ವ್ಯಕ್ತಿಯ ಕೈಮೇಲಿದ್ದ ಅಚ್ಚೆ ಹೆಸರುಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.