ETV Bharat / state

ಬ್ರಿಟಿಷರ ಕಾಲದಲ್ಲಿ ಬಳಕೆಯಲ್ಲಿದ್ದ ತೂಕ, ಅಳತೆಯ ಪರಿಕರ ಸಂಗ್ರಹಿಸಿ ಗಮನ ಸೆಳೆದ ಬಸವರಾಜ್

author img

By

Published : Jan 26, 2023, 10:41 AM IST

Updated : Jan 26, 2023, 1:11 PM IST

ತೂಕ ಹಾಗೂ ಅಳತೆ ಮಾಡುವ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಕುಟುಂಬವೊಂದು ಇದೀಗ ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ನಮೂನೆಯ ತೂಕದ ಯಂತ್ರಗಳು, 60ಕ್ಕೂ ಹೆಚ್ಚು ರಾಜ ಸಂಸ್ಥಾನಗಳಲ್ಲಿ ಆಯಾ ಕಾಲದಲ್ಲಿ ಬಳಕೆಯಲ್ಲಿದ್ದ ತೂಕ, ಅಳತೆಯ ಉಪಕರಣಗಳನ್ನು ಸಂಗ್ರಹಿಸಿ ಸುಂದರ ಮ್ಯೂಸಿಯಂ ನಿರ್ಮಿಸಿ ಗಮನ ಸೆಳೆದಿದೆ.

weight and measuring tools museum
ಬಸವರಾಜ್ ಯಳಮಲ್ಲಿ
ದಾವಣಗೆರೆಯಲ್ಲಿರುವ ತೂಕ, ಅಳತೆಯ ಉಪಕರಣಗಳ ಮ್ಯೂಸಿಯಂ

ದಾವಣಗೆರೆ: ನಗರದ ಕೆ.ಆರ್.ಮಾರುಕಟ್ಟೆಯ ಜನನಿಬಿಡ ಪ್ರದೇಶ ಚಾಮರಾಜಪೇಟೆಯಲ್ಲೊಂದು ತೂಕ, ಅಳತೆ ಮಾಡುವ ಪರಿಕರಗಳ ಮಾರಾಟದ ಅಂಗಡಿಯಿದೆ. ಈ ಅಂಗಡಿಯ ಮೊದಲ ಮಹಡಿಯಲ್ಲೊಂದು ಸದ್ದಿಲ್ಲದೆ ವಸ್ತು ಸಂಗ್ರಹಾಲಯ ತಲೆ ಎತ್ತಿದೆ. ಇದು ಅಂತಿಂಥ ವಸ್ತು ಸಂಗ್ರಹಾಲಯವಲ್ಲ, ಹಳೇ ಕಾಲದಿಂದ ಇಂದಿನವರೆಗೆ ಬಳಕೆಯಲ್ಲಿದ್ದ ಅಳತೆ ಮತ್ತು ತೂಕದ ಸಾಮಗ್ರಿಗಳನ್ನೊಳಗೊಂಡ ಸಂಗ್ರಹಾಲಯ.

ಬಸವರಾಜ್ ಯಳಮಲ್ಲಿ ಎಂಬುವರು ದೇಶದಲ್ಲೇ ಮೊದಲನೆಯದು ಎನಿಸಿರುವ ಈ ತೂಕ, ಅಳತೆಯ ವಿವಿಧ ಪರಿಕರಗಳನ್ನು ಸಂಗ್ರಹಿಸಿದ್ದಾರೆ. ಈ ಮ್ಯೂಸಿಯಂಗೆ 'ಕುಲಾ ಭವನ' ಎಂದು ಹೆಸರಿಡಲಾಗಿದ್ದು, ಕ್ರಿ.ಪೂ ಹಾಗೂ ಕ್ರಿ.ಶ 1600 ರ ವಿವಿಧ ಪರಿಕರಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಹೆಚ್ಚಿನ ಸಾಧನಗಳ ಕೆಳಗೆ ಅವುಗಳ ಕಾಲ, ಹೆಸರಿನ ಮಾಹಿತಿ ನಮೂದಿಸಲಾಗಿದೆ. ಇನ್ನು ಕೆಲವು ಪರಿಕರಗಳನ್ನು ಸಂಗ್ರಹಿಸಲು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಬಸವರಾಜ್ ಯಳಮಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.‌

ಕುದುರಿದ ಆಸಕ್ತಿ ಹೆಚ್ಚಿದ ಹುಮ್ಮಸ್ಸು: ಅಳತೆ ತೂಕದ ಪರಿಕರಗಳನ್ನು ಸಂಗ್ರಹಿಸಿ ಅವುಗಳನ್ನು ಶೇಖರಿಸಿಡಲು ಈ ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ. ಇದನ್ನು ಹುಟ್ಟು ಹಾಕಿರುವ ಬಸವರಾಜ ಯಳಮಲ್ಲಿ (54) ಅವರ ಕುಟುಂಬ ಮೊದಲು ತೂಕ-ಅಳಕೆ ವಸ್ತುಗಳ ವ್ಯಾಪಾರ ನಡೆಸಿಕೊಂಡು ಬಂದಿತ್ತು. ತಂದೆ ಚನ್ನವೀರಪ್ಪ ಯಳಮಲ್ಲಿ ಅವರ ಕಾಲದಲ್ಲೇ ಈ ಅಂಗಡಿ ಆರಂಭವಾಗಿತ್ತು. 25 ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ಬಸವರಾಜ್ ಅವರಿಗೆ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ತೂಕ, ಅಳತೆಗಳ ಸಂಗ್ರಹ ಯಾಕೆ ಮಾಡಬಾರದು ಎಂಬ ಯೋಚನೆ ಮೊಳಕೆಯೊಡೆಯಿತು. ಈ ಹವ್ಯಾಸಕ್ಕೆ ತೊಡಗುವ ಮೊದಲು ಅಂಚೆ ಚೀಟಿ ಸಂಗ್ರಹ ಮಾಡುತ್ತಿದ್ದ ಇವರಿಗೆ, ಮಹಾತ್ಮ ಗಾಂಧಿ ಅವರನ್ನು ಕುರಿತ ಅಂಚೆ ಚೀಟಿ ಪ್ರದರ್ಶನಕ್ಕೆ ರಾಷ್ಟ್ರಮಟ್ಟದಲ್ಲಿ ಕಂಚಿನ ಪದಕ ಕೂಡ ಬಂದಿದೆ. ಏನಾದರೂ ಹೊಸದನ್ನು ಮಾಡಬೇಕೆಂಬ ತುಡಿತದಲ್ಲಿದ್ದ ಇವರು,‌ ತೂಕ ಅಳತೆ ಪರಿಕರಗಳನ್ನು ಸಂಗ್ರಹಿಸಿದ್ದಾರೆ‌. ವಿಶೇಷ ಎಂದರೆ ಈ ಸಂಗ್ರಹಾಲಯದಲ್ಲಿ ಜೋಡಿಸಿಟ್ಟಿರುವ ಎಲ್ಲ ಪರಿಕರಗಳು ಸುಸ್ಥಿತಿಯಲ್ಲಿವೆ.

ಮಾಹಿತಿ ಸಂಗ್ರಹಣೆ ಸವಾಲಿನ ಕೆಲಸ: "ತೂಕ ಮತ್ತು ಆಳತೆ ಉಪಕರಣಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಇಂಟರ್‌ನೆಟ್‌ ಜಾಲಾಡಿದರೂ ಸಿಗುತ್ತಿದ್ದ ಮಾಹಿತಿ ಬಹಳ ಕಡಿಮೆ. ಇತಿಹಾಸದ ಪುಸ್ತಕಗಳಲ್ಲಿ ತೂಕದ ಪರಿಕರಗಳ ಬಳಕೆ ಬಗ್ಗೆ ಹೆಚ್ಚಿನ ಉಲ್ಲೇಖ ಇರುತ್ತಿರಲಿಲ್ಲ. ಹೀಗಾಗಿ, ನಾನು ಎಲ್ಲವನ್ನು ಮೂಲದಿಂದಲೇ ಸಂಗ್ರಹಿಸುವ ಉದ್ದೇಶದಿಂದ ದೇಶದ ಬಹುಭಾಗ ಓಡಾಡಿದೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ತೂಕ, ಅಳತೆ ಸಾಧನಗಳನ್ನು, ಅವುಗಳ ವಿವರಗಳನ್ನು ಸಂಗ್ರಹಿಸಲು ಅಲೆದಾಡಿದೆ. ಕೆಲವನ್ನು ಕೇಳಿ ಪಡೆದುಕೊಂಡಿದ್ದೇನೆ. ಕೆಲವನ್ನು ಗುಜರಿ ಅಂಗಡಿಗಳಿಂದ, ಹಳೆಯ ವಸ್ತು ಮಾರಾಟಗಾರರಿಂದ ಖರೀದಿಸಿದ್ದೇನೆ. ಈ ಕ್ಷೇತ್ರದ ಅನುಭವ ಕುರಿತು '2010ರಲ್ಲಿ ತೂಕ ಮತ್ತು ಆಳಕೆ ಸಾಧನೆಗಳ ಇತಿಹಾಸ ಮತ್ತು ಪರಂಪರೆ' ಎಂಬ ಪುಸ್ತಕ ಬರೆಯಲು ಪ್ರೇರಣೆಯಾಯಿತು. ಈ ಪುಸ್ತಕ ತೂಕ ಮತ್ತು ಅಳತೆಗಳ ಸಂಗ್ರಹಕ್ಕೆ ಸಂಬಂಧಿಸಿದ ಮೊದಲ ಮಾರ್ಗದರ್ಶಿ" ಎನ್ನುತ್ತಾರೆ ಬಸವರಾಜ್.

ಕ್ರಿ.ಪೂ, ಕ್ರಿ.ಶದಲ್ಲಿ ಉಪಯೋಗಿಸಿದ ಸಾಧನಗಳು: ದೇಶ, ವಿದೇಶಗಳಲ್ಲಿ ತಯಾರಾದ, ರಾಜ ಮನೆತನಗಳಲ್ಲಿದ್ದ ತೂಕ-ಅಳತೆಗಳ ಸಾಧನಗಳೆಲ್ಲವನ್ನು ಒಂದೇ ಸೂರಿನಡಿ ಇಲ್ಲಿ ನೋಡಬಹುದು. ಅಪರೂಪದ್ದೆನಿಸಿದ್ದ 18ನೇ ಶತಮಾನದಲ್ಲಿ ಬಳಕೆ‌ ಮಾಡುತ್ತಿದ್ದ ತಕ್ಕಡಿ ಡಬ್ಬಿ ಇಲ್ಲಿದೆ. ಇದನ್ನು ಬೆಳ್ಳಿ, ಬಂಗಾರದ ವಸ್ತುಗಳನ್ನು ತೂಗಲು ಬಳಸಲಾಗುತ್ತಿತ್ತು. ವಿಜಯಪುರ, ಬೀದರ್, ಕಲಬುರಗಿ, ರಾಯಚೂರು ಭಾಗದಲ್ಲಿ ಸುಲ್ತಾನರ ಆಡಳಿತದ ಕಾಲದಲ್ಲಿ ಬಳಸುತ್ತಿದ್ದರು. ಜೊತೆಗೆ ಹಿತ್ತಾಳೆಯಿಂದ ಮಾಡಿದ ನೆಲ್ಲಿಕಾಯಿ ಆಕಾರದ ತೂಕದ ಬಟ್ಟುಗಳ ಸಂಗ್ರಹ ಸಹ ಇದೆ.

ಇದನ್ನೂ ಓದಿ: ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಗಮನ ಸೆಳೆದ ಮುಸ್ಲಿಂ ಕುಟುಂಬ

ಇನ್ನು ಮಲೆನಾಡು ಭಾಗದಲ್ಲಿ ಬಳಕೆಯಲ್ಲಿದ್ದ ಅಷ್ಟಕೋನಾಕೃತಿಯ, ಹಿತ್ತಾಳೆಯ ಬಟ್ಟುಗಳು, ಹಾವೇರಿ ಭಾಗದಲ್ಲಿ ಬಳಕೆಯಲ್ಲಿದ್ದ ಚೌಕಾಕಾರದ ಹಿತ್ತಾಳೆ ಬಟ್ಟುಗಳು, ಕೆಳದಿ ಸಂಸ್ಥಾ‌ನ, ನಿಜಾಮರ ಸಂಸ್ಥಾನ, ಮೈಸೂರು ಒಡೆಯರ ಕಾಲದ ಹಿಪ್ಪಾಳೆಯ ಸೇರಿನ ಮಾಪುಗಳು,‌ ಗಂಟೆ ಪಾವುಗಳು, ಗಂಟೆಯಾಕರದ ತೂಕದ ಬಟ್ಟುಗಳು, ಗಂಡಭೇರುಂಡ ಲಾಂಛನವಿರುವ ಆಯತಾಕಾರದ ಅರ್ಥ ಮಣ, ಕಾಲು ಮಣದ ಕಬ್ಬಿಣದ ಬಟ್ಟುಗಳು ಇಲ್ಲಿವೆ. ದೇಶದ ವಿವಿಧ ಸಂಸ್ಥಾನಗಳಲ್ಲಿ ಇದ್ದ ಕಬ್ಬಿಣ ಮತ್ತು ಹಿತ್ತಾಳೆಯ ಬೀಮ್ ಸೈಲ್‌ಗಳು (ಕೈಯಲ್ಲಿ ಹಿಡಿದು ತೂಗಿಸುವು), ದಕ್ಷಿಣ ಕನ್ನಡದ ಎಣ್ಣೆ ಮಾಪುಗಳು, ಒಲಾ ಮೀನುಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಬಿದಿರಿನ ಪಾವುಗಳನ್ನು ಇಲ್ಲಿ ನೋಡಬಹುದು.

ಅಂಚೆ ಕಚೇರಿಗಳಲ್ಲಿ ಬಳಕೆ ಮಾಡ್ತಿದ್ದ ತಕ್ಕಡಿಗಳು: ಅಂಚೆ ಕಚೇರಿಗಳಲ್ಲಿ ಬಳಕೆಯಾಗುತ್ತಿದ್ದ ವಿವಿಧ ಸಾಮರ್ಥ್ಯದ, ಮಾದರಿಯ ತಕ್ಕಡಿಗಳ ಪ್ರತ್ಯೇಕ ವಿಭಾಗವೇ ಸಂಗ್ರಹಾಲಯದಲ್ಲಿದೆ. ಮುಂಬೈ, ಗೋವಾ, ಕೋಲ್ಕತ್ತಾ, ತಮಿಳುನಾಡು ಭಾಗದಲ್ಲಿದ್ದ ಮಾಪುಗಳು, ಗೋವಾದ ಪೋರ್ಚುಗೀಸರು, ಮೊಘಲರು, ಅದಿಲ್‌ ಶಾಹಿಗಳು, ಪೇಶ್ವೆಗಳು, ಹೈದರಾಬಾದ್​ ನಿಜಾಮರ ಅವಧಿಯಲ್ಲಿದ್ದ ಹಿತ್ತಾಳೆ ಮತ್ತು ತಗಡಿನ ಮಾಪುಗಳನ್ನು ಇಲ್ಲಿ ಕಾಣಬಹುದು. ಒಟ್ಟಾರೆ ದೇಶದ 60ಕ್ಕೂ ಹೆಚ್ಚು ರಾಜ ಸಂಸ್ಥಾನಗಳಲ್ಲಿ ಅಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಪರಿಕರಗಳು, ಇಂಗ್ಲೆಂಡ್, ಜರ್ಮನಿ, ಅಮೆರಿಕದಲ್ಲಿ ತಯಾರಾದ ತೂಕದ ಯಂತ್ರಗಳು, ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ನಮೂನೆಯ ತೂಕಗಳು, ಮನುಷ್ಯನ ತೂಕ ನೋಡುವ ನಾನಾ ರೀತಿಯ, ನಾನಾ ಕಾಲದ ಯಂತ್ರಗಳೂ ಇಲ್ಲಿವೆ. ಈ ಸಂಗ್ರಹಾಲಯ ನಿರ್ವಹಣೆಗಾಗಿ ನಾಲ್ವರು ನಿರ್ದೇಶಕರನ್ನು ಒಳಗೊಂಡ ಚನ್ನವೀರಪ್ಪ ಯಳಮಲ್ಲಿ ಟ್ರಸ್ಟ್ ಸಾಪಿಸಿ, 700 ವರ್ಷಗಳ ಹಳೆಯ ಪರಿಕರಗಳನ್ನು ಸಂಗ್ರಹಿಸಿದ್ದಾರೆ.

Last Updated : Jan 26, 2023, 1:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.