ಕಾರವಾರ: ಪುನೀತ್ ರಾಜ್‌ಕುಮಾರ್ ಅಭಿಮಾನಿ ತಮಿಳುನಾಡಿನ ಕೊಯಮತ್ತೂರು ಮೂಲದ ಮುತ್ತು ಸೆಲ್ವನ್ ಅವರು ಸೈಕಲ್ ಮೂಲಕ ವಿಶ್ವಪರ್ಯಟನೆ ಮಾಡುತ್ತಿದ್ದಾರೆ. ಜೊತೆಗೆ ತಮ್ಮ ಪ್ರಯಾಣದುದ್ದಕ್ಕೂ ಅಪ್ಪು ಹೆಸರಿನಲ್ಲಿ 4 ಲಕ್ಷಕ್ಕೂ ಅಧಿಕ ಗಿಡಗಳನ್ನು ನಾಟಿ ಮಾಡಿ ಗಮನ ಸೆಳೆದಿದ್ದಾರೆ. 2021ರ ಡಿಸೆಂಬರ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ಇವರು ಮಧ್ಯಪ್ರದೇಶದ ಮೂಲಕ ವಿವಿಧ ರಾಜ್ಯ ಸಂಚರಿಸಿ ಲಡಾಕ್ ಹಾಗೂ ರಾಜಸ್ಥಾನ ಮಾರ್ಗವಾಗಿ ಗೋವಾ ರಾಜ್ಯದಿಂದ ಇದೀಗ ಮರಳಿ ಕರ್ನಾಟಕ ತಲುಪಿದ್ದಾರೆ.
"ದಿನಕ್ಕೆ ಐವತ್ತು ಕಿಲೋಮೀಟರ್ ಸಂಚರಿಸಿ ಈವರೆಗೆ 23,650 ಕಿಲೋಮೀಟರ್ ಪೂರ್ಣಗೊಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದ ಕಾರಣ ತಾವು ಸಂಚರಿಸುವ ಎಲ್ಲಾ ತಾಲೂಕಿನಲ್ಲಿಯೂ ಸ್ಥಳೀಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಸಹಯೋಗದಿಂದ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಿದ್ದೇನೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇನೆ. ಒಟ್ಟು 5 ಲಕ್ಷ ಗಿಡ ನೆಡುವ ಉದ್ದೇಶ ಇದೆ" ಎಂದು ತಿಳಿಸಿದರು.
"ಪೆಟ್ರೋಲ್ ಬಂಕ್‌ಗಳಲ್ಲಿ ಮಲಗಿ ಈಗಾಗಲೇ 752 ದಿನಗಳನ್ನು ಕಳೆದಿದ್ದೇನೆ. ಮುಂದೆ ಪಾಂಡಿಚೇರಿ, ನೇಪಾಳ, ನಾಗಾಲ್ಯಾಂಡ್, ವಿಯೆಟ್ನಾಂ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ಜನವರಿ 26 ರಂದು ದೆಹಲಿಯಲ್ಲಿ ಸಂಚಾರ ಪೂರ್ಣಗೊಳಿಸಿ ಬಳಿಕ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಯ ಮುಂದೆ ಪ್ರವಾಸದ ಬಗೆಗಿನ ಪುಸ್ತಕ ಬಿಡುಗಡೆ ಮಾಡುತ್ತೇನೆ" ಎಂದರು.
"ಈ ಪ್ರಯಾಣದ ಮೂಲಕ ಗಿನ್ನಿಸ್ ದಾಖಲೆ ಮಾಡುವ ಗುರಿ ಇದೆ. ಆದರೆ ಇದು ಆರಂಭ ಮಾಡಿರುವುದರ ಹಿಂದೆ ಅಪ್ಪು ಸರ್ ಸಹಾಯ ಇದೆ. ನನ್ನ ಸ್ನೇಹಿತನ ಪತ್ನಿಗೆ ಅನಾರೋಗ್ಯ ಸರಿ ಇಲ್ಲದಿದ್ದಾಗ 2017ರಲ್ಲಿ ನಟ ಪುನೀತ್ ರಾಜ್‌ಕುಮಾರ್ ಬಳಿ ತೆರಳಿದಾಗ ಅವರು ತಮ್ಮ ಚಿನ್ನದ ಸರವನ್ನೇ ನೀಡಿದ್ದರು. ಇದನ್ನು ನೋಡಿ ನಾನು ಅವರ ಅಭಿಮಾನಿಯಾಗಿದ್ದೆ. ಇದೇ ಕಾರಣಕ್ಕೆ ಅವರ ಸಾಮಾಜಿಕ ಕಾರ್ಯ, ಸಹಕಾರ ಎಲ್ಲರಿಗೂ ಸ್ಫೂರ್ತಿಯಾಗಲಿ ಎನ್ನುವ ನಿಟ್ಟಿನಲ್ಲಿ ಈ ಪ್ರಯಾಣ ಆರಂಭಿಸಿದ್ದು, ಕೊನೆಯದಾಗಿ ಈ ಬಗ್ಗೆ ಪುಸ್ತಕ ಕೂಡ ಬರೆಯುತ್ತೇನೆ. ಈ ಪ್ರಯಾಣದ ಬಳಿಕ ಮತ್ತೆ ಉದ್ಯೋಗಕ್ಕೆ ತೆರಳುತ್ತೇನೆ. ನನ್ನ ಈ ಪ್ರಯಾಣಕ್ಕೆ ಪುನಿತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನಿತ್ ರಾಜ್‌ಕುಮಾರ್ ಅವರೇ ಸೈಕಲ್ ನೀಡಿದ್ದಾರೆ" ಎಂದರು.
45 ದಿನಗಳಲ್ಲಿ ಸುಲಲಿತ ಕನ್ನಡ: "ಎಂಬಿಎ ವಿದ್ಯಾರ್ಥಿಯಾಗಿದ್ದು, ಪ್ರಯಾಣ ಆರಂಭಿಸಿದ 45 ದಿನಗಳಲ್ಲಿ ಕನ್ನಡ ಕಲಿತಿದ್ದೇನೆ. ಪುನೀತ್ ರಾಜ್‌ಕುಮಾರ್ ಅವರು ಕನ್ನಡದವರಾಗಿರುವುದರಿಂದ ಕರ್ನಾಟಕದಲ್ಲಿ ಹೆಚ್ಚು ಸಂಚಾರ ಮಾಡಬೇಕು. ಅಲ್ಲದೆ ಪುನೀತ್ ರಾಜ್‌ಕುಮಾರ್ ಸಿನಿಮಾಗಳು ಹಾಗೂ ಇಲ್ಲಿನವರ ಒಡನಾಟದೊಂದಿಗೆ ಕೇವಲ 2 ತಿಂಗಳಲ್ಲಿ ಕನ್ನಡ ಕಲಿತಿದ್ದೇನೆ. ಇದಕ್ಕೆ ಮೈಸೂರಿನಲ್ಲಿ ನನಗೆ ಸನ್ಮಾನ ಕೂಡ ಮಾಡಿದ್ದಾರೆ" ಎಂದು ಸಂತೋಷ ಹಂಚಿಕೊಂಡರು.
ಇದನ್ನೂ ಓದಿ: "ಅಪ್ಪು" ಹೆಸರಲ್ಲಿ ಸೈಕಲ್ ಮೇಲೆ ಅಭಿಮಾನಿಯ ಪ್ರಪಂಚ ಪರ್ಯಟನೆ ; 5 ಲಕ್ಷ ಗಿಡ ನೆಡುವ ಗುರಿ - APPU FAN CYCLE YATRA