ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದ ಆವರಣದಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ಮಠಾಧಿಪತಿ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಹಿಡಿದಿದ್ದಾರೆ.
ಮಠದ ಆವರಣದ ಕಲ್ಯಾಣ ಮಂಟಪದಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಇದರಿಂದ ಭಯಭೀತರಾದ ಭಕ್ತರು ಹಾಗೂ ಅಲ್ಲಿನ ಜನರು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಕೆಲವರು ಹಾವನ್ನು ಕೊಲ್ಲಲು ಮುಂದಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಸನ್ನಾನಂದ ಪುರಿ ಸ್ವಾಮೀಜಿ ಸ್ಥಳಕ್ಕೆ ಭೇಟಿ ನೀಡಿ, ಬರಿಗೈಯಲ್ಲಿ ಒಂದು ಕೋಲಿನ ಸಹಾಯದಿಂದ ನಾಗರ ಹಾವನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಅಲ್ಲದೇ ಹಾವನ್ನು ಮಠದ ಹೊರ ಭಾಗದ ಕಾಡಿಗೆ ಸ್ವತಃ ಅವರೇ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಹಾವುಗಳನ್ನು ಯಾರೂ ಸಾಯಿಸಬಾರದು. ಅದು ಒಂದು ಜೀವಿಯಾಗಿದ್ದು, ಭೂಮಿ ಮೇಲೆ ಬದುಕಲು ಅದಕ್ಕೂ ಅರ್ಹತೆ ಇದೆ. ಆದರೆ, ಕೆಲವರು ಹಾವುಗಳನ್ನು ಕೊಲ್ಲುತ್ತಿದ್ದಾರೆ. ಹೀಗಾಗಿ ನಾಗರ ಹಾವುಗಳು ಸಹಾ ಅಳಿವಿನಂಚಿಗೆ ಹೋಗುತ್ತಿದ್ದು, ಅವುಗಳನ್ನು ಸಂರಕ್ಷಿಸುವ ಕೆಲಸ ಮನುಷ್ಯರು ಮಾಡಬೇಕು ಎಂದಿದ್ದಾರೆ.