ದಾವಣಗೆರೆ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಗರದ ಮಂಡಕ್ಕಿ ಭಟ್ಟಿ ಲೇಔಟ್ ನಿವಾಸಿ ಮೊಹ್ಮದ್ ಸಲೀಂ, ರಾಣೇಬೆನ್ನೂರು ಪಟ್ಟಣದ ಎಸ್ಜೆಎಂ ನಗರದ ನಿವಾಸಿ ಸೈಯ್ಯದ್ ಶೇರು ಬಂಧಿತ ಆರೋಪಿಗಳು.
ಆರೋಪಿಗಳು ದಾವಣಗೆರೆ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಮನೆ ಮಾಲೀಕ ಚೇತನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನಮಾಡಿದ್ದ ಚಿನ್ನಾಭರಣವನ್ನು ಖದೀಮರು ಕಡಿಮೆ ಬೆಲೆಗೆ ಚಿನ್ನದ ಅಂಗಡಿಯವರಿಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು 44 ಗ್ರಾಂ ಚಿನ್ನದ ಗಟ್ಟಿ, 57 ಸಾವಿರ ಬೆಲೆಬಾಳುವ ಚಿನ್ನಾಭರಣ, ಟಿವಿ, ದ್ವಿಚಕ್ರ ವಾಹನ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 3.47 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳು ವಿಲಾಸಿ ಜೀವನ ನಡೆಸಲು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ಈ ಹಿಂದೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಹರಿಹರ ಸೇರಿದಂತೆ ದಾವಣಗೆರೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿ, ಜೈಲು ಕಂಬಿ ಎಣಿಸಿದ್ದರು.
ಇದನ್ನೂ ಓದಿ: ಹಾಸನ: ಎರಡು ಪ್ರತ್ಯೇಕ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ