ದಾವಣಗೆರೆ: ಪ್ರೇಮ ಪ್ರಕರಣದ ಹಿನ್ನೆಲೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ರಂಗನಾಥ್ ತಾನು ಯುವತಿ ಜೊತೆ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ಆಕೆಯ ಕಡೆಯವರ ಕಿರುಕುಳದಿಂದ ವಿಷ ಕುಡಿದಿದ್ದೇವೆ ಎಂದಿದ್ದ. ಆದ್ರೆ, ಇದೀಗ ಆ ಯುವತಿಯೇ ಮಾಧ್ಯಮದವರ ಮುಂದೆ ಬಂದಿದ್ದು, ಆ ಕುಟುಂಬ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾಳೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಣಜಿಗೆರೆ ಗ್ರಾಮದ ಹನುಮಂತಪ್ಪರ ಪುತ್ರ ರಂಗನಾಥ್ ಹಾಗೂ ಆತ ಪ್ರೀತಿ ಮಾಡುತ್ತಿದ್ದ ಅಂತಾ ಹೇಳಿದ ಯುವತಿ ಜಾತಿಯ ಕುಲದಲ್ಲಿ ಇಬ್ಬರು ಅಣ್ಣ ತಂಗಿಯಾಗಬೇಕು. ಹಾಗಾಗಿ, ನಾವು ಮೊದಲಿನಿಂದಲೂ ಚೆನ್ನಾಗಿಯೇ ಇದ್ದವರು. ಅಕ್ಕ ಪಕ್ಕದ ಮನೆಯವರು. ಸಂಬಂಧಿಕರು ಆಗಬೇಕು. ಆದ್ರೆ, ನಮ್ಮ ಮೇಲೆ ಈಗ ಮಾಡಿರುವ ಆರೋಪ ಸತ್ಯಕ್ಕೆ ದೂರ. ಆ ಕುಟುಂಬದವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಎಂದು ಯುವತಿ ತಿಳಿಸಿದ್ದಾಳೆ. ನಾವಿಬ್ಬರು ಪ್ರೀತಿಸಿಯೇ ಇಲ್ಲ, ಆತನೊಂದಿಗೆ ಚೆನ್ನಾಗಿದ್ದದ್ದನ್ನೇ ತಪ್ಪು ತಿಳಿದುಕೊಂಡಿದ್ದಾನೆ. ಅವರ ತಮ್ಮನಿಗೆ ಮಾತ್ರ ಕೇಳಿದ್ದೇವೆ. ಬಳಿಕ ಈ ರೀತಿ ಮಾಡಿದ್ದಾರೆ. ಅಲ್ಲದೇ, ವಶೀಕರಣ ಮಾಡಿ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಆದರೆ, ಮರ್ಯಾದೆಗೆ ಅಂಜಿ ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಆತನ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವುದಾಗಿ ತಿಳಿಸಿದ್ದಾಳೆ.
ಆದ್ರೆ, ಇನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಮಲ್ಲಿಕಾರ್ಜುನ್,ಇಷ್ಟೆಲ್ಲಾ ನಮ್ಮ ಮೇಲೆ ಆರೋಪ ಮಾಡಿರುವುದರಿಂದ ಮನಸ್ಸಿಗೆ ಬೇಸರವಾಗಿದೆ. ನಾವು ಕಾನೂನು ಪ್ರಕಾರ ಹೋರಾಟ ನಡೆಸುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ, ರಂಗನಾಥನ ಕುಟುಂಬ ನಾವು ಮರ್ಯಾದೆಗೆ ಅಂಜಿ ದಾವಣಗೆರೆ ತಾಲೂಕಿನ ಅಣಜಿ ಕ್ರಾಸ್ ಬಳಿ ವಿಷ ಕುಡಿದೆವು ಎಂದರೆ, ಯುವತಿ ಕಡೆಯವರು ಮರ್ಯಾದೆ ಉಳಿಸಿಕೊಳ್ಳಲು ಹೋಗಿ ಇಷ್ಟೆಲ್ಲಾ ಯಡವಟ್ಟು, ಆರೋಪ ನಮ್ಮ ಮೇಲೆ ಕೇಳಿ ಬರುವಂತಾಗಿದೆ ಅಂತಾರೆ. ಇದೀಗ ರಂಗನಾಥನ ಕುಟುಂಬ ತಪ್ಪು ಮಾಡಿತೋ, ಯುವತಿ ಹೇಳುತ್ತಿರುವುದು ಸರಿಯೋ ಎಂಬ ಪ್ರಶ್ನೆಯೂ ಉದ್ಭವಿಸಿದೆ.ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಹೊರ ಬೀಳಲಿದೆ.