ದಾವಣಗೆರೆ: ಇದು ನಿಜಕ್ಕೂ ಕರುಣಾಜನಕ ಕಥೆ. ಮೂಕ ಪ್ರಾಣಿಗಳ ರೋದನೆ ಆಗಾಗ್ಗೆ ಕಾಣಸಿಗುತ್ತವೆ. ತನ್ನ ಮೂರು ಕರುಗಳನ್ನು ಕಳೆದುಕೊಂಡ ದೇವರ ಹಸುವಿನ ರೋದನೆಗೆ ಇಡೀ ಗ್ರಾಮವೇ ಮರುಗಿದೆ. ಗ್ರಾಮಸ್ಥರೆಲ್ಲರೂ ಮೃತ ಕರುಗಳಿಗೆ ಹೂವಿನ ಹಾರ ಅರ್ಪಿಸಿ ಬೀಳ್ಕೊಟ್ಟರಲ್ಲದೇ, ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇಂಥ ಘಟನೆಗೆ ಸಾಕ್ಷಿಯಾಗಿರುವುದು ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ. ಇಲ್ಲಿನ ಬೀರೂರು - ಸಮ್ಮಸಗಿ ರಾಜ್ಯ ಹೆದ್ದಾರಿಯ ಪಿಳ್ಳಮ್ಮ ದೇಗುಲದ ಬಳಿ ಕಳೆದ 12 ನೇ ತಾರೀಖಿನಂದು ರಾತ್ರಿ 9 ಗಂಟೆ ಸುಮಾರಿಗೆ ರಸ್ತೆಯಲ್ಲಿ ಮಲಗಿದ್ದ ಮೂರು ಕರುಗಳ ಮೇಲೆ ಅಪರಿಚಿತ ವಾಹನವೊಂದು ಹರಿದು ಹೋಗಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿವೆ. ಇದನ್ನು ನೋಡಿದ ಹಸು ಅತ್ತಿಂದಿತ್ತ ಅಂಬಾ.. ಅಂಬಾ.. ಎಂದು ಅರಚುತ್ತಾ ಓಡಾಡುತ್ತಿದ್ದದ್ದು ಅಲ್ಲಿದ್ದ ಜನರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು.
ಅಂದ ಹಾಗೆ ಇದು ಈಶ್ವರ ದೇವರ ಹಸು. ತನ್ನ ಮೂರು ಕರುಗಳೊಂದಿಗೆ ಗ್ರಾಮದ ತುಂಬೆಲ್ಲಾ ಓಡಾಡಿಕೊಂಡಿತ್ತು. ದೇವರ ಹಸುವಾಗಿದ್ದ ಕಾರಣ ಯಾರೂ ಸಹ ಗದ್ದೆಗೆಗೆ ನುಗ್ಗಿ ಬೆಳೆ ತಿಂದರೂ, ತರಕಾರಿ ಮೇಯ್ದರೂ ಓಡಿಸುತ್ತಿರಲಿಲ್ಲ. ಅಷ್ಟು ಪ್ರೀತಿಯ ದೇವರ ಹಸುವಾಗಿತ್ತು. ಒಂದು ವರ್ಷದಿಂದ ಮೂರು ವರ್ಷ ವಯಸ್ಸಿನ ಕರುಗಳು ಸಹ ಹಸಿರು ಮೇಯ್ದು ಮನೆಯಂಗಳ, ರಸ್ತೆಯಲ್ಲಿ ಮಲಗುತ್ತಿದ್ದವು. ಅಷ್ಟು ಪ್ರೀತಿ ಪಾತ್ರವಾಗಿದ್ದ ತನ್ನ ಕರುಗಳನ್ನು ಕಳೆದುಕೊಂಡ ದೇವರ ಹಸು ತನ್ನ ಮಕ್ಕಳನ್ನು ಬಿಟ್ಟು ಕದಲದೇ ಬೆಳಗಿನವರೆಗೆ ರೋದಿಸಿದೆ. ಜನರು ಆಹಾರ ಕೊಟ್ಟರೂ ಸ್ವೀಕರಿಸಿಲ್ಲ.
ಇನ್ನು ಅಪಘಾತದಲ್ಲಿ ಮೃತಪಟ್ಟ ಮೂರು ಕರುಗಳನ್ನ ಗ್ರಾಮಸ್ಥರು ಗೌರವಪೂರ್ವಕವಾಗಿ ಬೀಳ್ಕೊಟ್ಟಿದ್ದಾರೆ. ಕರುಗಳಿಗೆ ಗ್ರಾಮಸ್ಥರು ಹೂವಿನ ಹಾರ ಅರ್ಪಿಸಿದ್ದಾರೆ. ಗ್ರಾಮದ ತುಂಬೆಲ್ಲಾ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಿ ಬಳಿಕ ಈಶ್ವರದ ದೇವಸ್ಥಾನದ ಹತ್ತಿರ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಒಟ್ಟಾರೆ, ತನ್ನ ಕರು ಕಳೆದುಕೊಂಡು ರೋದಿಸುತ್ತಿದ್ದ ಹಸುವಿನ ಸ್ಥಿತಿ ಕಂಡು ಜನರು ಕಣ್ಣೀರು ಸುರಿಸಿದ್ದಾರೆ.