ದಾವಣಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 5 ವರ್ಷದ ತನ್ನ ಮಗುವನ್ನು ಹೊತ್ತುಕೊಂಡು ಮಹಿಳೆಯೋರ್ವಳು 90 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದ ತಾಯಿ-ಮಗುವನ್ನು ದಾವಣಗೆರೆಯ ಎಸ್ಎಸ್ ಖಾಸಗಿ ಆಸ್ಪತ್ರೆ ಬಳಿ ಪೊಲೀಸರು ತಪಾಸಣೆಗೆಂದು ತಡೆದಿದ್ದಾರೆ. ನಾಗರತ್ನ ಮಗುವನ್ನು ಹೊತ್ತುಕೊಂಡು 90 ಕಿಲೋ ಮೀಟರ್ ನಡೆದುಕೊಂಡು ಬಂದ ವಿಷಯ ಈ ವೇಳೆ ಬೆಳಕಿಗೆ ಬಂದಿದೆ.
ಗಂಡನ ಮನೆಯಲ್ಲಿ ಜಗಳವಾಡಿಕೊಂಡ ನಾಗರತ್ನ ಬೆಳಗಿನ ಜಾವ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ತನ್ನ ಐದು ವರ್ಷದ ಕಂದಮ್ಮನನ್ನು ಹೊತ್ತುಕೊಂಡು ತಲೆ ಮೇಲೆ ಗಂಟು ಇಟ್ಟುಕೊಂಡು 90 ಕಿಲೋ ಮೀಟರ್ ನಡೆದು ದಾವಣಗೆರೆ ತಲುಪಿದ್ದಾಳೆ. ಶಿವಮೊಗ್ಗದಿಂದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತುಂಬಿಗೆರೆಯಲ್ಲಿರುವ ಅಕ್ಕನ ಮನೆಗೆ ನಾಗರತ್ನ ತೆರಳುತ್ತಿದ್ದಳು. ಲಾಕ್ಡೌನ್ ಹಿನ್ನೆಲೆ ಬಸ್ಗಳು ಇಲ್ಲದ ಕಾರಣ ಮಹಿಳೆ ನಡೆದುಕೊಂಡು ಬಂದಿದ್ದಾಳೆ.
ದಾವಣಗೆರೆಗೆ ಪ್ರವೇಶಿಸುತ್ತಿದ್ದಂತೆ ಎಸ್.ಎಸ್ ಹೈಟೆಕ್ ಆಸ್ಪತ್ರೆಯ ಬಳಿ ಪೊಲೀಸರು ತಾಯಿ-ಮಗುವನ್ನು ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿದ ಬಳಿಕ ವಿಷಯ ತಿಳಿದ ಪೋಲಿಸರು ತಮ್ಮ ವಾಹನದಲ್ಲಿ ತಾಯಿ-ಮಗುವನ್ನು ತುಂಬಿಗೆರೆಗೆ ಬಿಟ್ಟು ಬಂದು ಮಾನವೀಯತೆ ಮೆರೆದರು.