ದಾವಣಗೆರೆ: ಸರ್ಕಾರ ಮುಸ್ಲಿಂ ಸಮಾಜದ ಏಳಿಗೆಗೆ ವಕ್ಛ್ ಬೋರ್ಡ್ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದು, ಅದನ್ನು ಅದೇ ಸಮುದಾಯದ ಕೆಲ ಮುಖಂಡರು ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಇಂಥದೊಂದು ಅವ್ಯವಹಾರ ಬೆಳಕಿಗೆ ಬಂದಿದೆ.
ಇಲ್ಲಿನ ಮುಸ್ಲಿಂ ಸಮಾಜದ ಉದ್ಧಾರಕ್ಕಾಗಿ ವಕ್ಛ್ ಬೋರ್ಡ್ ಅಡಿಯಲ್ಲಿ ಜುಮ್ಮಾ ಜಾಮಿಯ ಮಸೀದಿ ಕಮಿಟಿ ರಚಿಸಲಾಗಿತ್ತು. 2008 ರಲ್ಲಿ ರಚನೆಯಾದ ಈ ಕಮಿಟಿ ಅಧ್ಯಕ್ಷರಾದ ಎಮ್ಬಿ ಮಹಮ್ಮದ್ ರೋಷನ್, ಸೆಕ್ರೆಟರಿ ಗುಲಾಬ್ ಷಾ, ಖಜಾಂಚಿ ನಸೀರ್ ಷಾ, ಸಹಕಾರ್ಯದರ್ಶಿ ರಫಿವುಲ್ಲಾ ಸೇರಿ 13 ಜನ ಸದಸ್ಯರ ಕಮಿಟಿಯನ್ನು ರಚಿಸಲಾಗಿತ್ತು. ಈ ಕಮಿಟಿಯೇ ಮುಸ್ಲಿಂ ಸಮಾಜಕ್ಕೆ ಸೇರಿದ ಸರ್ವ ಆಸ್ತಿಯನ್ನು ನಿರ್ವಹಣೆ ಮಾಡುತ್ತಿತ್ತು. ಇದೀಗ ಕಮಿಟಿ ಮೇಲೆ ಕೋಟಿಗಟ್ಟಲೆ ಅವ್ಯವಹಾರ ಮಾಡಿರುವ ದಾಖಲೆ ಬಹಿರಂಗವಾಗಿವೆ.
ಜಾಮಿಯಾ ಮಸೀದಿ ಕಮಿಟಿಯಡಿಯಲ್ಲಿ ಬರುವ ಆದಾಯ:
ಜಾಮಿಯಾ ಮಸೀದಿಗೆ ಸೇರಿದ 30 ಮಳಿಗೆ ಬಾಡಿಗೆ ಹಣ, ಜಾಮಿಯಾ ಶಾದಿ ಮಾಲ್ ಬಾಡಿಗೆ ಹಣ ಮತ್ತು 30 ಎಕರೆ ಜಮೀನು, ಸಮಾಜದ ಜನ ನೀಡಿದ ದೇಣಿಗೆ ಹೀಗೆ ಎಲ್ಲ ಆಸ್ತಿ, ಆದಾಯಗಳನ್ನು ಕಮಿಟಿಯು ನಿರ್ವಹಣೆ ಮಾಡುತ್ತಿತ್ತು. ಇದಕ್ಕೆ ಸರ್ಕಾರದಿಂದ ಅನುದಾನ ಕೂಡ ಬರುತ್ತಿತ್ತು. ಆದರೆ ಹಳೆ ಕಮಿಟಿಯಲ್ಲಿದ್ದ ಕಮಿಟಿ ಅಧ್ಯಕ್ಷರಾದ ಎಮ್.ಬಿ. ಮಹಮ್ಮದ್ ರೋಷನ್ ಮತ್ತು ಸದಸ್ಯರು ಸೇರಿ ಕಮಿಟಿಯ ಹಣವನ್ನು ದುರ್ಬಳಕೆ ಮಾಡಿರೋದು ಬಹಿರಂಗವಾಗಿದೆ.
2008 ರಿಂದ 2019 ರವರೆಗೆ ಕಮಿಟಿಯ ಅಧ್ಯಕ್ಷರಾದ ಎಮ್.ಬಿ. ಮಹಮ್ಮದ್ ರೋಷನ್ ಸೇರಿ 13 ಜನ ಸದಸ್ಯರ ಸಮಿತಿ ಕಾನೂನು ಬಾಹಿರ ಆಡಳಿತ ಮಾಡುವ ಮೂಲಕ ಮಲೆಬೆನ್ನೂರು ಜುಮ್ಮಾ ಜಾಮಿಯ ಮಸೀದಿ ಮಳಿಗೆಗಳನ್ನು ಬಾಡಿಗೆ ನೀಡಿದ ಹಣ, ಶಾದಿ ಮಾಲ್ ಬಾಡಿಗೆ ಹಣ, 30 ಎಕರೆ ಜಮೀನು ಲೀಜ್ಗೆ ಹಾಕಿದ ಹಣ, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ದುರುಪಯೋಗವಾಗಿದ್ದು ಬಹಿರಂಗವಾಗಿದೆ. ಇದರ ಬಗ್ಗೆ ರಾಜ್ಯ ವಕ್ಫ್ ಮಂಡಳಿಯ ಹಣಕಾಸು ವಿಭಾಗದ 3 ಜನ ಸತ್ಯಶೋಧನಾ ಸಮಿತಿ ಸದಸ್ಯರು ಕೂಡ ತನಿಖೆ ನಡೆಸಿದ್ದು, ಸರ್ಕಾರಕ್ಕೆ 102 ಪುಟಗಳ ವರದಿ ಸಲ್ಲಿಸಿದೆ.
ಸತ್ಯಶೋಧನಾ ವರದಿಯಲ್ಲಿ 2014-15 ರಿಂದ 2018 ರವರೆಗೆ ಆದಂಥ ಹಣಕಾಸಿನ ವ್ಯವಹಾರದಲ್ಲಿ 1,89,51,849 ಕೋಟಿ ರೂಪಾಯಿ ಅವ್ಯವಹಾರವಾಗಿರುವುದು ಸಾಬೀತಾಗಿದೆ. ಆದ್ದರಿಂದ ಈ ಕಮಿಟಿಯನ್ನು ಅಮಾನತಿನಲ್ಲಿಟ್ಟು, ಅವರಿಂದ ಈ ಹಣ ವಸೂಲಿ ಮಾಡಬೇಕು ಜೊತೆಗೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅದೇ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ಓದಿ: ಕಾಂಗ್ರೆಸ್, ಕಮ್ಯುನಿಸ್ಟರು ರೈತರ ಹೆಸರಲ್ಲಿ ಡಬಲ್ ಸ್ಟಾಂಡರ್ಡ್ ಹೋರಾಟ ಮಾಡ್ತಿದ್ದಾರೆ: ರವಿಕುಮಾರ್
ಇನ್ನು ಮೊಹಮ್ಮದ್ ಫಾಜಿಲ್ ಎಂಬುವವರು 2018ರಲ್ಲಿ ರಾಜ್ಯ ವಕ್ಫ್ ಬೋರ್ಡ್ಗೆ ದೂರು ನೀಡಿದ್ದು, ದೂರಿನಂತೆ ತನಿಖೆ ನಡೆಸಿರುವ ಸತ್ಯಶೋಧನಾ ಸಮಿತಿ ಅವ್ಯವಹಾರ ಆಗಿರೋದನ್ನು ಪತ್ತೆ ಮಾಡಿದೆ. ಆದರೆ ಭ್ರಷ್ಟಾಚಾರ ಆಗಿರೋದು ಸಾಬೀತಾಗಿದ್ದರು ಕೂಡ ಕಮಿಟಿ ಸದಸ್ಯರ ಮೇಲೆ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗಿಲ್ಲ ಹಾಗೂ ಪ್ರಕರಣ ದಾಖಲಾಗಿಲ್ಲ. ಹೀಗಾಗಿಯೇ ಈ ಬಗ್ಗೆ ಮುಸ್ಲಿಂ ಸಮಾಜದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕಮಿಟಿಯ ಸದಸ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.