ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಿಷ್ಯ ವೇತನಕ್ಕೆ ಆಗ್ರಹಿಸಿ ಸತತ ಆರು ದಿನಗಳಿಂದ ನಡೆಸುತ್ತಿರುವ ಮುಷ್ಕರವನ್ನು ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ನಾಳೆ ಒಂದು ದಿನ ಕೈಬಿಟ್ಟಿದ್ದಾರೆ.
ಸಚಿವರು ಭರವಸೆ ನೀಡಿದ್ದಾರೆ. ನಾಳೆ ಮುಷ್ಕರ ನಡೆಸುವುದಿಲ್ಲ ಎಂದ ಪ್ರತಿಭಟನಾನಿರತರು, ಸೋಮವಾರದ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂಬುದನ್ನು ಕಾಯುತ್ತೇವೆ. ನಮ್ಮ ಪರವಾಗಿ ಬರದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಚಿವ ಭೈರತಿ ಬಸವರಾಜ್ ಅವರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದಿದ್ದು ಸಂತಸದ ವಿಚಾರ. ಜೆಜೆಎಂ ಕಾಲೇಜಿನ ಆಡಳಿತ ಮಂಡಳಿ ಸೋಮವಾರ ಶಿಷ್ಯ ವೇತನ ನೀಡುವುದಾಗಿ ಒಪ್ಪಿಕೊಂಡಿದೆ. ದಯವಿಟ್ಟು ಮುಷ್ಕರ ನಿಲ್ಲಿಸಿ ಎಂಬ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ದಾವಣಗೆರೆಗೆ ಆಗಮಿಸಿದರೂ ಪ್ರತಿಭಟನಾ ಸ್ಥಳಕ್ಕೆ ಏಕೆ ಬರಲಿಲ್ಲ. ನಾವೆಂದರೆ ಅಷ್ಟು ಕೀಳಾ? ಸೌಜನ್ಯಾಕ್ಕಾದರೂ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ ಮುಷ್ಕರನಿರತರು, ಆಡಳಿತ ಮಂಡಳಿಯಿಂದ ಸರ್ಕಾರವೇ ಹಣ ಪಡೆಯಲಿ. ಆ ಹಣವನ್ನು ಸರ್ಕಾರವೇ ನೀಡಲಿ ಎಂಬ ಬೇಡಿಕೆ ಇದೆ. ಸೋಮವಾರ ನಡೆಯುವ ಸಭೆಗೆ ನಮ್ಮಲ್ಲಿ ಯಾರದರೂ ಇಬ್ಬರನ್ನು ಆಹ್ವಾನಿಸಬಹುದಿತ್ತು. ಯಾಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.