ದಾವಣಗೆರೆ: ಕಮಿಷನ್ ಕೇಳಿದ್ದೇನೆ ಎನ್ನುವ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎನ್ನುವ ಮೂಲಕ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕಮಿಷನ್ ಆರೋಪವನ್ನು ತಳ್ಳಿಹಾಕಿದ್ದಾರೆ.
ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದ ಪಾಲಿಕೆ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿರುವ ಆಡಿಯೋದಲ್ಲಿ, ಸಚಿವರಿಗೆ ಹಣ ಕೊಡ್ಬೇಕು ಎಂದು ಹೇಳಲಾಗಿದೆ ಎನ್ನಲಾಗ್ತಿದೆ. ಈ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ನಗರದಲ್ಲಿಂದು ಪ್ರತಿಕ್ರಿಯಿಸಿದ ಸಚಿವರು, ಇದರ ಬಗ್ಗೆ ತನಿಖೆಯಾಗಿ ಸತ್ಯಾಂಶ ಹೊರಬರಲಿದೆ. ಲೋಕಾಯುಕ್ತ ದಾಳಿಗೊಳಗಾದವರು ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ, ಕಳೆದ ಎರಡು ವರ್ಷಗಳಲ್ಲಿ ನಾನು ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದೇನೆ. ಹಿಂದುಳಿದ ವರ್ಗದ ಸಚಿವರುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆ ಎಸ್ ಈಶ್ವರಪ್ಪ ಮೇಲೆ ಕೂಡ ಇದೇ ರೀತಿ ಆರೋಪ ಮಾಡಿದ್ದರು. ತನಿಖೆಯಾದ ಬಳಿಕ ಅವರು ಆರೋಪ ಮುಕ್ತರಾಗಿ ಬಂದಿದ್ದಾರೆ. ಅದೇ ರೀತಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಈ ಕುರಿತು ಕಾನೂನು ಸಲಹೆಗಾರರ ಜೊತೆ ಚರ್ಚೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಪಿಡಿಒ ಕಮಿಷನ್ ಕೇಳಿರುವ ಆರೋಪ: ಕ್ರಮಕ್ಕೆ ರೈತ ಸಂಘ ಒತ್ತಾಯ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜಾರಕಿಹೊಳಿ ಕ್ಷಮೆ ಕೇಳಲ್ಲ ಎಂದರೆ ಹೇಗೆ. ಹಿಂದೂಸ್ತಾನ್ ಎಂದು ನಮ್ಮ ದೇಶವನ್ನು ಕರೆಯುತ್ತಾರೆ. ಆದರೆ ಅದೇ ಪದ ಹಿಂದೂ ಎನ್ನುವುದು ಆಶ್ಲೀಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.