ದಾವಣಗೆರೆ : ಇಂದು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಬಣ್ಣ ಬಣ್ಣದ ಲೋಕವೇ ಧರೆಗಿಳಿದಿತ್ತು. ಇನ್ನು ಯುವಕ ಯುವತಿಯರಂತೂ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಆದ್ರೆ, ಸ್ವಾಮೀಜಿಯೊಬ್ಬರು ಟಗರು ಸಿನಿಮಾದ ಹಾಡಿಗೆ ವಿದೇಶಿಗರ ಜೊತೆ ಜಬರ್ದಸ್ತಾಗಿ ಸ್ಟೆಪ್ ಹಾಕಿದರು.
ಈ ಘಟನೆಗೆ ಸಾಕ್ಷಿಯಾಗಿದ್ದು ದಾವಣಗೆರೆ ಜಿಲ್ಲೆಯ ಹರಿಹರದಿಂದ ಹೊರ ವಲಯದಲ್ಲಿರುವ ಪಂಚಮ ಸಾಲಿ ಪೀಠ. ಇಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷವಾಗಿ ಯೋಗ ಹೋಳಿ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಸ್ವಾಮೀಜಿ ಬಿಂದಾಸ್ ಆಗಿಯೇ ಕುಣಿದರು.
ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ ಹಾಗೂ ಪಂಚಮ ಸಾಲಿ ಪೀಠದಿಂದ ಈ ಯೋಗ ಹೋಳಿ ಹಬ್ಬ ಆಯೋಜಿಸಲಾಗಿತ್ತು. ಶ್ವಾಸಗುರು ವಚನಾನಂದ ಸ್ವಾಮೀಜಿ ಗುರುಪೀಠದಲ್ಲಿ ಯೋಗ ಸಂಭ್ರಮ ಮನೆ ಮಾಡಿತ್ತು.
ಪೀಠದ ಆವರಣದಲ್ಲಿ 12 ಕ್ಕೂ ಹೆಚ್ಚು ದೇಶಗಳ ನೂರಾರು ಜನ ಯೋಗ ಹೋಳಿಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಹಾಕಿಕೊಂಡು ವಿದೇಶಿಗರ ಜೊತೆ ಕುಣಿದ ವಚನಾನಂದ ಸ್ವಾಮೀಜಿ ಹಬ್ಬನ್ನು ಸಖತ್ತಾಗಿಯೇ ಸಂಭ್ರಮ ಅಚರಿಸಿದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದ ಹಾಡಿಗೆ ವಚನಾನಂದ ಸ್ವಾಮೀಜಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ವಿದೇಶಿಗರು ಸಹ ಈ ಸಂಭ್ರಮದಲ್ಲಿ ಭಾಗಿಯಾದರು. ಬೆಳ್ಳಂಬೆಳಿಗ್ಗೆಯಿಂದಲೇ ಪರಸ್ಪರ ಬಣ್ಣ ಹಚ್ಚಿಕೊಂಡು ಖುಷಿಪಟ್ಟ ನೂರಾರು ಮಂದಿ, ಬಣ್ಣದಲ್ಲಿ ಮಿಂದೆದ್ದರು.