ದಾವಣಗೆರೆ: ಬೇರೆಯವರ ಹೊಲ ಗುತ್ತಿಗೆ ಮಾಡ್ತ ಆರು ಎಕರೆಯಲ್ಲಿ ಕಬ್ಬು ಬೆಳೆದಿದ್ದ ಬಡ ರೈತನ ಬದುಕನ್ನು ವಿದ್ಯುತ್ ಸರ್ವನಾಶ ಮಾಡಿದೆ. ವಿದ್ಯುತ್ ಲೈನ್ ಮುರಿದು ಬಿದ್ದಿದ್ದರಿಂದ ಇಡೀ 10 ಲಕ್ಷ ವ್ಯಯ ಮಾಡಿ ಮಕ್ಕಳಂತೆ ಪೋಷಿಸಿ ಬೆಳೆಸಿದ್ದ ಫಸಲಿಗೆ ಬಂದಿದ್ದ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಇದರಿಂದ ರೈತ ಸಾಲಸೋಲ ಮಾಡಿ ಬೆಳೆದಿದ್ದ ಫಸಲು ಕೈಗೆ ಬರುವ ಮುನ್ನವೇ ನೆಲಕಚ್ಚಿದೆ. ಇದರಲ್ಲಿ ಕೆಇಬಿಯವರ ನಿರ್ಲಕ್ಷ್ಯವೇ ಕಾರಣ ಎಂದು ರೈತ ಪರಿಹಾರಕ್ಕಾಗಿ ಸರ್ಕಾರದ ಕದತಟ್ಟಿದ್ದಾನೆ.
ದಾವಣಗೆರೆ ತಾಲೂಕಿನ ಜವಳಘಟ್ಟ ಹಳ್ಳಿಯ ಕೂಗಳತೆಯಲ್ಲಿರುವ ಏಳನೇ ಮೈಲಿಗಲ್ಲು ಗ್ರಾಮದ ರೈತ ವಿಜಯ್ ಕುಮಾರ್ಗೆ ಕಬ್ಬು ಸಿಹಿಯಾಗುವ ಮುನ್ನವೇ ಕಹಿಯಾಗಿದೆ. 06 ಎಕರೆ ಬೇರೆಯವರ ಜಮೀನನ್ನು ಗುತ್ತಿಗೆ ಮಾಡ್ತಿರುವ ರೈತ ವಿಜಯ್ ಕುಮಾರ್ ಒಟ್ಟು 10 ಲಕ್ಷ ವ್ಯಯ ಮಾಡಿ ಕಬ್ಬು ಬೆಳೆದಿದ್ದರು. ಇನ್ನೇನು ಇಡೀ ಫಸಲನ್ನು ಕಟಾವು ಮಾಡಬೇಕು ಎಂಬ ಸಮಯದಲ್ಲಿ ಬೆಂಕಿ ಅವಘಡ ನಡೆದು ರೈತನ ಬದುಕು ದುಸ್ತರವಾಗಿದೆ.
'ಕರೆಂಟ್ ಅವಘಡದಿಂದಾಗಿ ಕಬ್ಬು ಸುಟ್ಟು ಹೋಗಿದೆ. ನಾನು ಗುತ್ತಿಗೆ ಆಧಾರದ ಮೇಲೆ ಕಬ್ಬನ್ನು ಬೆಳೆಯುತ್ತಿದ್ದೇನೆ. ಈಗಾಗಲೇ ಸುಮಾರು ನೂರು ಬಾರಿ ಕೆಇಬಿಯವರಿಗೆ ಲೈನ್ ಜೋತು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರು ಅಧಿಕೃತವಾಗಿ ಅರ್ಜಿಯನ್ನು ಸ್ವೀಕರಿಸಿದ್ದಾರೆ. ಆದರೆ ಎಂಡೋಸ್ಮೆಂಟ್ ಕಾಪಿಯನ್ನು ಕೊಟ್ಟಿಲ್ಲ.
15 ರಿಂದ 20 ಲಕ್ಷ ನಷ್ಟ: ಬೆಳೆ ಸುಟ್ಟು ಹೋಗುತ್ತಿರುವುದು ಗೊತ್ತಾದಾಗಲೂ ಅವರು ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಅಷ್ಟೂ ಬೆಳೆ ನಾಶವಾಗಿದೆ. ಇದರಿಂದಾಗಿ ಸುಮಾರು 15 ರಿಂದ 20 ಲಕ್ಷ ನನಗೆ ಲಾಸ್ ಆಗಿದೆ. ಇದಕ್ಕೆಲ್ಲ ಕಾರಣ ಎಇಇ ಹಾಗೂ ಲೈನ್ಮ್ಯಾನ್ಗಳು. ಅವರಿಂದಲೂ ಪರಿಹಾರ ಕೊಡಿಸಬೇಕು. ಅಲ್ಲದೇ ಅವರನ್ನು ಸಸ್ಪೆಂಡ್ ಮಾಡಿಸಬೇಕು. ನಮ್ಮ ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆಗಳು ಆಗಬಾರದು. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಅವರನ್ನು ಕೂಡಲೇ ವಜಾ ಮಾಡಬೇಕು' ಎಂದು ರೈತ ವಿಜಯ್ ಕುಮಾರ್ ಒತ್ತಾಯಿಸಿದ್ದಾರೆ.
ಇನ್ನು ಕಬ್ಬಿನ ಗದ್ದೆಯಲ್ಲಿ ಬಿದ್ದ ಕೆಇಬಿ ಲೈನ್ ಅನ್ನು ಸರಿಪಡಿಸದ ಕೆಇಬಿ ಅಧಿಕಾರಿಗಳ ವಿರುದ್ಧ ರೈತ ವಿಜಯ್ ಕುಮಾರ್ ಹದಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ಸುಟ್ಟಿರುವ ಕಬ್ಬನ್ನು ಕೂಡ ಬಿಡದೇ ರೈತ ವಿಜಯ್ ಕುಮಾರ್ ಅವರು ಹತ್ತಿರದ ಕುಕ್ಕವಾಡ ಸಕ್ಕರೆ ಕಾರ್ಖಾನೆಗೆ ರವಾನೆ ಮಾಡ್ತಿದ್ದಾರೆ. ದುರಂತ ಅಂದ್ರೆ ಒಳ್ಳೆ ಕಬ್ಬಿಗೆ ಒಂದು ಟನ್‌ಗೆ 2,820 ರೂಪಾಯಿ ನಿಗದಿ ಮಾಡಲಾಗಿದೆ.
ಕೆಇಬಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ಆದರೆ ರೈತ ವಿಜಯ್ ಕುಮಾರ್ ಅವರು ಕಬ್ಬು ಸುಟ್ಟಿದ್ದರಿಂದ ಒಂದು ಟನ್‌ಗೆ 250 ಕೆಜಿ ಕಡಿಮೆ ಲೆಕ್ಕಕ್ಕೆ ತೆಗೆದುಕೊಳ್ಳದೆ ತೂಕ ಹಾಕಿ ಖರೀದಿ ಮಾಡಿದ್ದರಿಂದ ರೈತನಿಗೆ ಲಾಸ್ ಆಗಲಿದೆ. ಇದಕ್ಕೆ ಕಾರಣಕರ್ತರಾದ ಕೆಇಬಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರೈತ ವಿಜಯ್ ಕುಮಾರ್ ಗೆ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರಾದ ಸತೀಶ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಕಲಬುರಗಿ ಜಿಲ್ಲೆಯ ಅತಿವೃಷ್ಠಿ ಬೆಳೆ ಹಾನಿ: ಏಳು ಕಂತಿನಲ್ಲಿ 234 ಕೋಟಿ ಪರಿಹಾರ - ಡಿಸಿ ಯಶವಂತ ಗುರುಕರ್