ದಾವಣಗೆರೆ: ಸರ್ಕಾರಿ ಸ್ವತ್ತನ್ನು ಕೆಡವಬೇಕಾದರೆ ಮೊದಲು ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವೇ ಸ್ಥಳೀಯ ಮಟ್ಟದ ಅಧಿಕಾರಿಗಳ ಒಪ್ಪಿಗೆ ಪಡೆದು ಕಟ್ಟಡವನ್ನು ಉರುಳಿಸಬೇಕು. ಆದರೆ ಕೆಲ ಗ್ರಾ.ಪಂ ಸದಸ್ಯರು ಹಾಗು ಅಧ್ಯಕ್ಷ ಸೇರಿದಂತೆ ಪಿಡಿಒ ನೇತೃತ್ವದಲ್ಲಿ ಇನ್ನೂ ಬಾಳಿಕೆ ಬರುವ ಲಕ್ಷಾಂತರ ಮೌಲ್ಯದ ಬೆಲೆಬಾಳುವ ಸರ್ಕಾರಿ ಕಟ್ಟಡವನ್ನೇ ಅನುಮತಿ ಇಲ್ಲದೆ ನೆಲಸಮ ಮಾಡಿ, ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಪಿಸಿ ಸದಸ್ಯರ ವಿರುದ್ಧ ಸಾಮಾಜಿಕ ಹೋರಾಟಗಾರ ಪ್ರಸನ್ನ ಕುಮಾರ್ ಎಂಬುವರು ಏಕಾಂಗಿ ಹೋರಾಟ ನಡೆಸಿದ್ದಾರೆ.
ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಗ್ರಾಮ ಪಂಚಾಯತಿ ವಿರುದ್ಧ ಅದೇ ಗ್ರಾಮದ ಹೋರಾಟಗಾರ ಸೆಡ್ಡು ಹೊಡೆದಿದ್ದಾರೆ. ಕುಂದೂರು ಗ್ರಾಪಂಚಾಯತ್ಗೆ ಸೇರಿದ 20 ವರ್ಷದ ಹಿಂದೆ ನಿರ್ಮಾಣ ಮಾಡಿದ್ದ ಎರಡು ಕಟ್ಟಡವನ್ನು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಸರ್ಕಾರದ ಅನುಮತಿ ಇಲ್ಲದೆ ನೆಲಸಮ ಮಾಡಿದ್ದಾರೆಂದು ಹೋರಾಟಗಾರ ಪ್ರಸನ್ನ ಕುಮಾರ್ ರವರು ಹೋರಾಟದ ಅಸ್ತ್ರ ಹೂಡಿದ್ದಾರೆ. ಇದರಿಂದ ಈ ಸರ್ಕಾರದ ಆಸ್ತಿಯನ್ನು ಕಬಳಿಕೆ ಮಾಡಲು ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅಧಿಕಾರಿಗಳು ಕೂಡ ಶಾಮೀಲಾಗಿ ಕಟ್ಟಡ ನೆಲಸಮ ಮಾಡಿದ್ದಾರೆಂದು ಪ್ರಸನ್ನ ಕುಮಾರ್ ದೂರಿದ್ದಾರೆ.
ಮೇಲಾಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮ ಪಂಚಾಯತಿ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಕುಳಿತ ಬೆನ್ನಲ್ಲೇ ಜಿಲ್ಲಾ ಪಂಚಾಯತಿ ಸಿಇಒ ತನಿಖೆಗೆ ಅದೇಶ ನೀಡಿದ್ದಾರೆ. ನಾವು ಯಾವುದೇ ಕಟ್ಟಡವನ್ನು ತೆರವು ಮಾಡಿಲ್ಲ ಎಂದು ಮೇಲಾಧಿಕಾರಿಗಳು ಉತ್ತರ ನೀಡಿದ್ದಾರೆ. ಹಾಗಾದರೆ ಹಳೇ ಕಟ್ಟಡ ಎಲ್ಲಿ ಇದೆ ಹುಡುಕಿಕೊಡಿ ಎಂದು ಪ್ರಸನ್ನ ಕುಮಾರ್ ಹೋರಾಟ ಮುಂದುವರೆಸಿದ್ದಾರೆ.
ಮತ್ತೆ ಹೋರಾಟಕ್ಕೆ ಮಣಿದ ಅಧಿಕಾರಿಗಳು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಒಬ್ಬ ಗ್ರಾಪಂ ಸದಸ್ಯ ಕಟ್ಟಡ ಉರುಳಿಸಿದ್ದು ಎಂದು ಆ ಸದಸ್ಯನ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ಪ್ರಸನ್ನ ಕುಮಾರ್ ಅವರು ಕುಂದೂರು ಗ್ರಾ.ಪಂ ಸಂಬಂಧಿಸಿದಂತೆ ಎರಡು ಕಟ್ಟಡಗಳನ್ನು ನಾಶಪಡಿಸಿದ್ದು, ಗ್ರಾ.ಪಂ ಸದಸ್ಯರು ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸಿ ಎಂದು ಆಗ್ರಹಿಸಿದ್ದಾರೆ.
ಈ ಕಟ್ಟಡಗಳು 30 ವರ್ಷಗಳು ಬಾಳಿ ಹಾಗು 40 ಲಕ್ಷದಷ್ಟು ಮೌಲ್ಯದ್ದಾಗಿದೆ. ಮೇಲಾಧಿಕಾರಿಗಳಿಗೆ ಸ್ಪಷ್ಟೀಕರಣ ಕೇಳಿದರೆ ಈ ಕಟ್ಟಡಗಳನ್ನು ಗ್ರಾಪಂ ಹಾಗು ತಾಲೂಕು ಪಂಚಾಯತಿಗಳಿಂದ ನಾಶಪಡಿಸಲಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಈಗ ಕಟ್ಟಡ ತೆರವುಗೊಳಿಸಿ 10 ತಿಂಗಳ ನಂತರ ಪಿಡಿಒ ಕ್ರಮ ಕೈಗೊಂಡಿದ್ದು, ಕೇವಲ ಒಬ್ಬ ಸದಸ್ಯನ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಒ ವಿಜಯ್ ಗೌಡರ್ ಅವರು ಗ್ರಾ.ಪಂ ಹಳೆಯ ಕಟ್ಟಡಗಳನ್ನು ಅನುಮತಿ ಇಲ್ಲದೆ ಗ್ರಾ.ಪಂ ಸದಸ್ಯರಾದ ಧನಂಜಯ್ ನಾಶಪಡಿಸಿದ್ದಾರೆ. ಅವರ ವಿರುದ್ಧ ದೂರು ದಾಖಲಾಗಿದೆ. ಧನಂಜಯ್ ಅವರೇ ಆಗಮಿಸಿ ಕಟ್ಟಡಗಳನ್ನು ನೆಲಸಮ ಮಾಡಿದ್ದೇನೆ ಎಂದು ಪಂಚಾಯತಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. 10 ತಿಂಗಳ ಹಿಂದೆ ಕಟ್ಟಡಗಳನ್ನು ನಾಶ ಮಾಡಿದ್ದು ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಅವರು ಮಾಡಿರುವುದು ತಪ್ಪು ಹಾಗು ಅವರ ಸದಸ್ಯತ್ವ ರದ್ದು ಮಾಡಲು ಸೂಚಿಸಲಾಗಿದೆ. ನಮ್ಮ ಮೇಲೂ ಶೋಕಾಸ್ ನೋಟಿಸ್ಅನ್ನು ಸರ್ಕಾರದಿಂದ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: High Court news: ಪೊಲೀಸ್ ಪ್ರಾಧಿಕಾರದ ಅಧ್ಯಕ್ಷ, ಸದಸ್ಯರ ನೇಮಕಕ್ಕೆ 2 ವಾರ ಗಡುವು ನೀಡಿದ ಹೈಕೋರ್ಟ್