ಹರಿಹರ : ರಾಜ್ಯ ಬಿಜೆಪಿ ಸರ್ಕಾರದ ಅವಧಿ ಇನ್ನೂ 3 ವರ್ಷಗಳಿದ್ದು, ತಾವು ಹಾಗೂ ದಾವಣಗೆರೆ ಶಾಸಕರಾದ ಎಸ್.ಎ.ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಎಸ್.ರಾಮಪ್ಪ ಒಟ್ಟಾಗಿ ಅವಳಿ ನಗರಗಳ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದಿಂದ 1.45 ಕೋಟಿ ರೂ. ವೆಚ್ಚದಲ್ಲಿ ನಗರದ ಬೀರೂರು-ಸಮ್ಮಸಗಿ ರಸ್ತೆಗೆ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಸಂಸದರು, ದೂಡಾ ರಚನೆಯಾಗಿ ಸುಮಾರು 26 ವರ್ಷಗಳ ನಂತರ ಹರಿಹರದ ಅಭಿವೃದ್ದಿಗೆ 1 ಕೋಟಿ ರೂ. ನಷ್ಟು ಬೃಹತ್ ಮೊತ್ತ ಬಿಡುಗಡೆಯಾಗಿರುವುದು ಇದೆ ಮೊದಲು. ದೂಡಾದಲ್ಲಿ ತಮ್ಮ ಪಕ್ಷದ ಆಡಳಿತವಿದ್ದು, ಹರಿಹರದ ಪೌರಾಯುಕ್ತರು, ಅಧ್ಯಕ್ಷರೊಂದಿಗೆ ಚರ್ಚಿಸಿ ಅಗತ್ಯ ಅಭಿವೃದ್ದಿ ಕಾರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿ ಹಣ ಮಂಜೂರು ಮಾಡಿಸಿಕೊಳ್ಳಬೇಕು ಎಂದರು.
ರಾಜ್ಯ ಬಿಜೆಪಿ ಸರ್ಕಾರದ ಅವಧಿ ಇನ್ನೂ 3 ವರ್ಷಗಳಿದ್ದು, ತಾವು ಹಾಗೂ ದಾವಣಗೆರೆ ಶಾಸಕರಾದ ಎಸ್.ಎ.ರವೀಂದ್ರನಾಥ್, ಶಾಮನೂರು ಶಿವಶಂಕರಪ್ಪ, ಎಸ್.ರಾಮಪ್ಪ ಒಟ್ಟಾಗಿ ಅವಳಿ ನಗರಗಳ ಅಭಿವೃದ್ದಿಗೆ ಶ್ರಮಿಸುತ್ತೇವೆ ಎಂದಿದ್ದಾರೆ.
ಶಾಸಕ ಎಸ್.ರಾಮಪ್ಪ ಮಾತನಾಡಿ, ರಸ್ತೆ ಅಗಲೀಕರಣ, ಅಭಿವೃದ್ದಿಯಾಗಿ ಹಲವು ವರ್ಷಗಳೆ ಉರುಳಿದರೂ ಬೀದಿ ದೀಪ ಅಳವಡಿಸಲಾಗಿರಲಿಲ್ಲ. ಹಿಂದೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ತಮ್ಮದೆ ಪಕ್ಷದ ಮಾದಪ್ಪ ಹಾಗೂ ಅಂದಿನ ಡಿಸಿ ರಮೇಶ್ ಅವರೊಂದಿಗೆ ಸಭೆಯಲ್ಲಿ ಹರಿಹರಕ್ಕೆ ಮನ್ನಣೆ ನೀಡುತ್ತಿಲ್ಲವೆಂದು ವಾಗ್ವಾದ ನಡೆಸಿ, 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೆ. ಇದರೊಂದಿಗೆ ನಗರಸಭೆಯ 45 ಲಕ್ಷ ರೂ. ಅನುದಾನ ಸೇರಿಸಿ, 1.45 ಕೋ.ರೂ. ವೆಚ್ಚದಲ್ಲಿ ಹಳೆ ಪಿಬಿ ರಸ್ತೆಯ ತುಂಗಭದ್ರಾ ನದ ಬಳಿಯ ರಾಘವೇಂದ್ರ ದೇವಸ್ಥಾನದಿಂದ ದಾವಣಗೆರೆ ಮಾರ್ಗದ 2ನೇ ಗೇಟ್‌ವರೆಗೆ ಬೀದಿ ದೀಪ ಅಳವಡಿಸಲಾಗುವುದು ಎಂದರು.
ನಗರ ವ್ಯಾಪ್ತಿಯ 8 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು ಅಲ್ಲದೆ 1.45 ಕೋಟಿ ರೂ. ವೆಚ್ಚದ ಎಕ್ಕೆಗೊಂದಿ ರಸ್ತೆ, 17 ಕೋಟಿ ವೆಚ್ಚದ ದೀಟೂರು-ಪಾಮೇನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದ್ದು, ಆದಷ್ಟು ಬೇಗ ಸಂಸದರು ಸಿಎಂ ಜೊತೆ ಚರ್ಚಿಸಿ ಮಂಜೂರಾದ ಕಾಮಗಾರಿಗಳ ಅನುದಾನ ದೊರಕಿಸಬೇಕು. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ, ಉಳಿದಂತೆ ಒಟ್ಟಾಗಿ ಅಭಿವೃದ್ದಿಗೆ ಕೈಜೋಡಿಸೋಣ ಎಂದು ಸಂಸದರಿಗೆ ಮನವಿ ಮಾಡಿದರು.