ದಾವಣಗೆರೆ: ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡು ಮಗ ಮೃತಪಟ್ಟು, ತಾಯಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಶುಭಾಶ್ ಪೂಜಾರ್ ಎಂಬಾತ ಸಾವನ್ನಪ್ಪಿದ್ದು, ತಾಯಿ ಗುತ್ತ್ಯಮ್ಮಗೆ ತೀವ್ರ ಗಾಯಗಳಾಗಿದೆ.
ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗಲೇ ಘಟನೆ ನಡೆದಿದ್ದು, ಬಹುದೊಡ್ಡ ಅನಾಹುತ ತಪ್ಪಿದೆ. ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಹಿಳೆಗೆ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಸಿಲಿಂಡರ್ ತಂದು ಫಿಕ್ಸ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಮಹಿಳೆಯು ಕಟ್ಟಿಗೆ ಒಲೆಯಲ್ಲಿ ರೊಟ್ಟಿ ಸುಡುತ್ತಿದ್ದರು. ಪಕ್ಕದಲ್ಲಿ ಮಗ ಸುಭಾಶ್ ಸಿಲಿಂಡರ್ ಫಿಕ್ಸ್ ಮಾಡುವಾಗ ಎರಡು ಬಾರಿ ಗ್ಯಾಸ್ ಲೀಕ್ ಆಗಿದೆ. ಅದನ್ನು ಸುಭಾಶ್ ಗಮನಿಸಿರಲಿಲ್ಲ ಎನ್ನಲಾಗುತ್ತಿದೆ.
ಬಳಿಕ ಮತ್ತೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಲೀಕ್ ಆಗಿದ್ದು, ಪಕ್ಕದಲ್ಲೇ ಒಲೆಯಲ್ಲಿನ ಬೆಂಕಿ ದಿಢೀರ್ ಆವರಿಸಿಕೊಂಡು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮುಂದಿನ ವಾರ ಜನ್ಮದಿನ.. ಮದುವೆ ದಿನವೇ ನೇಣಿಗೆ ಶರಣಾದ ವಧು!