ದಾವಣಗೆರೆ: ದಲಿತ ವರ್ಗದ ಮಠಾಧೀಶರಂದ್ರೆ ಮೇಲ್ವರ್ಗದ ಶ್ರೀಗಳು ತಲೆಮೇಲೆ ಕಾಲಿಡಲು ಬರ್ತಾರೆ. ಯಾರಿಗೂ ತಲೆಮೇಲೆ ಕಾಲಿಡಲು ಅವಕಾಶ ಕಲ್ಪಿಸಬೇಡಿ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದರು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಲಿತರಿಗಾಗಿಯೇ ಜಾತಿ ನಿಂದನೆ ಕಾನೂನಿದೆ. ಆ ಕಾನೂನು ಹೆಚ್ಚು ದುರ್ಬಳಕೆಯಾಗ್ತಿದೆ. ಅದನ್ನು ಖಂಡಿಸುತ್ತೇನೆ. ಎಲ್ಲರೂ ಸಮನವಾಗಿ ಬಾಳಬೇಕೆಂದು ಈ ಕಾನೂನುಗಳನ್ನು ಜಾರಿ ಮಾಡಲಾಗಿದೆ. ಯಾರೂ ಮೇಲಲ್ಲ. ಇಲ್ಲಿ ಯಾರೂ ಕೀಳಲ್ಲ, ಎಲ್ರೂ ಒಂದೇ ಎಂದರು.
ನಾವು ಮೇಲ್ವರ್ಗ, ಕೆಳವರ್ಗದ ಮಠಾಧೀಶರು ಎಂದುಕೊಳ್ಳಬಾರದು. ಎಲ್ಲಾ ಮಠಾಧೀಶರು ಒಂದೇ. ಜಾತಿ ಹೆಚ್ಚುತ್ತಿದೆ, ಅದನ್ನು ನಿವಾರಣೆ ಮಾಡಲು ಆಗುತ್ತಿಲ್ಲ. ಜಾತಿ ನಿರ್ಮೂಲನೆಗೆ ಬಸವಣ್ಣನವರು ಕೂಡ ಪ್ರಯತ್ನ ಮಾಡಿದ್ರೂ ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಇಂಡಸ್ಟ್ರಿಯಲ್ ಕಾರಿಡಾರ್‌ಗಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರ ಜಮೀನು ವಶಪಡಿಸಿಕೊಳ್ಳುವುದರಲ್ಲಿ ನಮ್ಮ ತಕರಾರಿಲ್ಲ. ಆ ಜಮೀನಿಗಳಿಗೆ ಖಾಯಂ ಮಾಲೀಕ ರೈತನೇ ಆಗಬೇಕು ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮುಂದೆ ಪ್ರಸ್ತಾಪ ಇಟ್ಟಿದ್ದೇನೆ ಎಂದು ತಿಳಿಸಿದರು.
ರೈತರ ಭೂಮಿಯನ್ನು ಯಾವುದೋ ಇಂಡಸ್ಟ್ರಿಯಲ್ ಮಾಲೀಕನಿಗೆ ಕೊಡ್ತೀರಿ. ಹತ್ತು ಲಕ್ಷಕ್ಕೆ ರೈತರ ಜಮೀನು ಪಡೆದು ಕೋಟಿ ಕೋಟಿಗೆ ಮಾರಾಟ ಮಾಡುತ್ತಿದ್ದೀರಿ. ರೈತರಿಂದ ಪಡೆದ ಭೂಮಿಗೆ ಮಾಲೀಕ ರೈತನಾಗಿರಬೇಕೇ ಹೊರತು ಕೈಗಾರಿಕೋದ್ಯಮಿ ಅಲ್ಲ. ರೈತನಿಂದ ಪಡೆದ ಜಮೀನಿನಲ್ಲಿ ಕಂಪನಿ ಮುಳುಗಿ ಹೋದ್ರೆ ಆ ಕಂಪನಿಯನ್ನು ಹರಾಜು ಹಾಕ್ಬೇಕೇ ಹೊರತು ಭೂಮಿಯನ್ನು ಹರಾಜು ಹಾಕುವಂತಿಲ್ಲ. ಈ ನಿಯಮ ಜಾರಿಯಾದ್ರೆ ದೇಶದ ರೈತರು ನೆಮ್ಮದಿಯಿಂದ ಜೀವನ ಮಾಡ್ತಾರೆ ಎಂದು ಸಿರಿಗೆರೆ ಶ್ರೀ ಅಭಿಪ್ರಾಯಪಟ್ಟರು.
ಇದನ್ನೂಓದಿ: ಅಯೋಧ್ಯೆ ಶ್ರೀರಾಮ ಮಂದಿರ ದ್ವಾರ ಸ್ತಂಭಕ್ಕೆ ಪೂಜೆ