ಹರಿಹರ: ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಕೊಲೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಯನ್ನು ಬಂಧಿಸಿ, ಸಮಗ್ರ ತನಿಖೆ ನೆಡೆಸಬೇಕೆಂದು ಒತ್ತಾಯಿಸಿ ಇಂದು ತಾಲೂಕು ಜೆಡಿಸ್ ಘಟಕ ಹಾಗೂ ಶಿವಪ್ಪ ಅಭಿಮಾನಿ ಸಾಂಸ್ಕೃತಿಕ ಬಳಗದಿಂದ ಗ್ರೇಡ್-2 ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ನಗರದ ಜೆಡಿಎಸ್ ಕಚೇರಿಯಿಂದ ಆರಂಭವಾದ ಮೌನ ಪ್ರತಿಭಟನಾ ಮೆರವಣಿಗೆಯು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ಗ್ರೇಡ್-2 ತಹಶೀಲ್ದಾರ್ ಚೆನ್ನವೀರಸ್ವಾಮಿ, ಪಿಎಸ್‌ಐಗಳಾದ ಶೈಲಶ್ರೀ ಹಾಗೂ ಡಿ. ರವಿಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮಾಜಿ ಶಾಸಕ ಶಿವ ಶಂಕರ್ ಅವರ ಏಳಿಗೆಯನ್ನು ಸಹಿಸಲಾಗದೆ ಹತ್ಯೆಗೆ ಸಂಚು ರೂಪಿಸಿದ್ದಾರೆ. ಅದರ ಪ್ರಮುಖ ಆರೋಪಿಯಾಗಿರುವ ನಂದಿ ನಿರ್ಮಾಣ ಸಂಸ್ಥೆಯ ಮಂಜುನಾಥ್ ರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಇವರ ಸಹಚರ ಆರೋಪಿತರಾದ ಕಂಚೀಕೇರಿ ವಿನಯ್ ಹಾಗೂ ರಾಕೇಶ್‌ರನ್ನು ತನಿಖೆಗೆ ಒಳಪಡಿಸಿ, ಇವರ ಹಿಂದಿರುವ ರೂವಾರಿಗಳು ಯಾರು ಎಂಬುದನ್ನು ಪತ್ತೆಹಚ್ಚಿ, ಅವರ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಂದಿ ನಿರ್ಮಾಣ ಸಂಸ್ಥೆಯ ಮಾಲೀಕರಾದ ಮಂಜುನಾಥ್ ಗ್ರೀನ್ ಸಿಟಿ ಎಂಬ ಹೆಸರಿನ ಬಡಾವಣೆಯ ಗುತ್ತಿಗೆದಾರರಾಗಿದ್ದು, ಈ ಬಡಾವಣೆಯು ದೂಡಾದಿಂದಾಗಲಿ, ನಗರಸಭೆಯಿಂದಾಗಲಿ ಕಾನೂನು ರೀತಿಯಲ್ಲಿ ಅನುಮೋದನೆ ಪಡೆಯದೆ ಬಡಾವಣೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ಮಾಜಿ ಶಾಸಕರು ಸಾರ್ವಜನಿಕರ ಹಿತದೃಷ್ಟಿಯಿಂದ ಇಲಾಖೆಗಳಿಗೆ ಪತ್ರದ ಮೂಲಕ ತಕರಾರು ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು. ಪ್ರಶ್ನಿಸಿದ್ದಕ್ಕೆ ಬಡಾವಣೆಯ ನಿರ್ಮಾಣ ಕಾರ್ಯವು ಸ್ಥಗಿತ ಗೊಂಡಿತ್ತು. ಶಿವಶಂಕರ್ ಅವರು ಬಡಾವಣೆಯ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಅವರನ್ನು ಮುಗಿಸಲು ಮಂಜುನಾಥ್ ತಮ್ಮ ಸಹಚರರೊಂದಿಗೆ ಸಂಚು ರೂಪಿಸಿರುವುದು ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ಬಹಿರಂಗಗೊಂಡು ಅವರ ಹತ್ಯೆಯ ಸಂಚು ವಿಫಲವಾಗಿದೆ ಎಂದು ತಿಳಿಸಿದರು.