ದಾವಣಗೆರೆ : ದಿಢೀರ್ ಬ್ರೇಕ್ ಹಾಕಿದ ಕಾರಣಕ್ಕೆ ಕಾರು ಪಲ್ಪಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ವೇಳೆ ಒಂದೇ ಕುಂಟುಂಬದ ನಾಲ್ಕು ಜನ ಕಾರಿನೊಳಗೆ ಸಿಲುಕಿಕೊಂಡಿದ್ದರು. ಇದೇ ಕಾರಿನಲ್ಲಿದ್ದ ಬಾಲಕ ಎದೆಗುಂದದೆ ಧೈರ್ಯದಿಂದ ತನ್ನ ತಂದೆ, ತಾಯಿ ಹಾಗೂ ಸಹೋದರಿಯ ಪ್ರಾಣ ಉಳಿಸಿದ್ದ. ಇಂಥದ್ದೊಂದು ಅಪರೂಪದ ಸಾಹಸ ತೋರಿದ ಬಾಲಕನಿಗೆ ಇದೀಗ ದೆಹಲಿಯಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ ನಿವಾಸಿ ಮಂಜುನಾಥ್ ಮತ್ತು ಶೃತಿ ದಂಪತಿಯ 12 ವರ್ಷದ ಪುತ್ರ ಕೀರ್ತಿಗೆ ಶೌರ್ಯ ಪ್ರಶಸ್ತಿ ಲಭಿಸಿದೆ.
21 ಆಗಸ್ಟ್ 2022ರಂದು ಬಾಲಕ ಕೀರ್ತಿ ವಿವೇಕ್ ಸಾಹುಕಾರ್, ತನ್ನ ತಂದೆ, ತಾಯಿ, ಸಹೋದರಿ ಸೇರಿ ನಾಲ್ವರು ಕಾರಿನಲ್ಲಿ ಪಯಣಿಸುತ್ತಿದ್ದರು. ಜಗಳೂರಿನಿಂದ 25 ಕಿಲೋಮೀಟರ್ ಅಂತರದಲ್ಲಿರುವ ಅಗಸನಹಳ್ಳಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನಕ್ಕೆಂದು ಅವರು ತೆರಳುತ್ತಿದ್ದರು. ಈ ಮಾರ್ಗದ ಕಿರಿದಾದ ರಸ್ತೆಯೊಂದರಲ್ಲಿ ಕಾರಿನ ಚಕ್ರಕ್ಕೆ ನಾಯಿ ಮರಿ ಸಿಲುಕಿತ್ತು. ತಕ್ಷಣ ಕೀರ್ತಿಯ ತಂದೆ ನಾಯಿಯ ಜೀವ ಉಳಿಸುವ ಸಲುವಾಗಿ ಬ್ರೇಕ್ ಹಾಕಿದಾಗ ಕಾರು ಪಲ್ಟಿಯಾಗಿ ಕಂದಕಕ್ಕೆ ಬಿದ್ದಿತ್ತು.
ಕಾರಿನ ಬಾಗಿಲುಗಳು ತೆರೆಯಲಾಗದಂತೆ ಲಾಕ್ ಆಗಿದ್ದವು. ಯಾರಿಗೂ ಕಾರಿನಿಂದ ಹೊರಬರಲು ಸಾಧ್ಯವಾಗದೇ ನಾಲ್ವರ ಪ್ರಾಣಕ್ಕೆ ಕಂಠಕ ಎದುರಾಗಿತ್ತು. ಬಾಲಕ ಕೀರ್ತಿಯ ಸಮಯಪ್ರಜ್ಞೆಯಿಂದ ತಂದೆ, ತಾಯಿ, ಸಹೋದರಿ ಸೇರಿ ಮೂವರು ಪ್ರಜ್ಞೆ ತಪ್ಪಿದ್ದರು. ಈ ಸಂದರ್ಭದಲ್ಲಿ ಸಂಜೀವಿನಿಯಾಗಿ ಪ್ರಾಣ ಕಾಪಾಡಿದವ ಈ ಬಾಲಕ.
ಸಣ್ಣಪುಟ್ಟ ಗಾಯಗಳಾಗಿದ್ದ ಸಹೋದರಿ ಅಳುತ್ತಿದ್ದಳು. ತಾಯಿ ಕೈ ಮುರಿದುಕೊಂಡಿದ್ದರು. ಬೆನ್ನುಮೂಳೆಗೆ ಪೆಟ್ಟು ಬಿದ್ದು ತಂದೆಗೆ ಡ್ರೈವರ್ ಸೀಟ್‌ನಿಂದ ಏಳಲು ಸಾಧ್ಯವಾಗುತ್ತಿರಲಿಲ್ಲ. ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಇಂಥ ಸಂದರ್ಭದಲ್ಲಿ ಕೀರ್ತಿ ತನ್ನ ಗಾಯಗಳ ಬಗ್ಗೆ ಗಮನಿಸದೇ ಸಹಾಯಕ್ಕೆ ಮುಂದಾಗಿ ಇಡೀ ಕುಟುಂಬದ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದ. ಕಾರಿನ ಬಾಗಿಲು ಲಾಕ್ ಆಗಿದ್ದರಿಂದ ಲೋಹದ ನೀರಿನ ಬಾಟಲ್ನಿಂದ ಕಾರಿನ ಮುಂಭಾಗದ ಗಾಜು ಒಡೆದು ಮೊದಲು ತಂಗಿಯನ್ನು ರಕ್ಷಿಸಿ ಕಾರಿಂದ ಹೊರ ಕರೆತಂದಿದ್ದಾನೆ. ನಂತರ ತನ್ನ ತಂದೆಯನ್ನೂ ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದ. ಎಚ್ಚರ ತಪ್ಪಿದ ಸ್ಥಿತಿಯಲ್ಲಿದ್ದ ತಾಯಿಯನ್ನು ತಂದೆ-ಮಗ ಇಬ್ಬರೂ ಸೇರಿ ಹೊರತರುವಲ್ಲಿ ಯಶಸ್ವಿ ಆಗಿದ್ದರು.
ಘಟನೆ ಬಳಿಕ ಧೈರ್ಯಶಾಲಿ ಹುಡುಗ ಅಷ್ಟಕ್ಕೆ ನಿಲ್ಲದೇ ಪೊಲೀಸ್ ಆಂಬ್ಯುಲೆನ್ಸ್ ಮತ್ತು ಸಂಬಂಧಿಕರಿಗೆ ಫೋನ್ ಕರೆ ಮಾಡಿದ್ದಾನೆ. ಅರ್ಧ ಗಂಟೆಯ ನಂತರ ಪೊಲೀಸರು ಹಾಗೂ ಸಂಬಂಧಿಕರು ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. "ನನ್ನ ಮಗ ಕೀರ್ತಿಯ ಧೈರ್ಯವೇ ಆತನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದಕ್ಕಿಸಿಕೊಟ್ಟಿದೆ. ಬಹಳ ಸಂತಸವಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಲಕ ಕೀರ್ತಿ ವಿವೇಕ್ ಸಾಹುಕಾರ್ ಜಗಳೂರಿನ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡ್ತಿದ್ದಾನೆ. ತಂದೆ ಮಂಜುನಾಥ್ ಸಾಹುಕಾರ್ ಜಗಳೂರಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಶೃತಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
ಇದನ್ನೂ ಓದಿ: ಜಲಪಾತದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ್ದ ಧೀರ: ಹುಬ್ಬಳ್ಳಿಯ ಆದಿತ್ಯ ಶಿವಳ್ಳಿಗೆ ಶೌರ್ಯ ಪ್ರಶಸ್ತಿ