ದಾವಣಗೆರೆ: ಜೆಇಇ ಮೇನ್ಸ್, ಅಡ್ವಾನ್ಸ್ ಹಾಗೂ ನೀಟ್ ಪರೀಕ್ಷೆಗಳಲ್ಲಿ ಪ್ರತಿಭಾವಂತ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯಲ್ಲಿ ಅನ್ಯಾಯ ಎಸಗಲಾಗುತ್ತದೆ ಎಂದು ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಆರೋಪ ಮಾಡಿದ್ದಾರೆ.
ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಮಾತ್ರ ಈ ವಿದ್ಯಾರ್ಥಿಗಳು ಸ್ಪರ್ಧೆ ಮಾಡಬೇಕಾದ ಸ್ಥಿತಿ ಇದೆ. ಒಂದು ವೇಳೆ ಸೀಟು ಸಿಗದಿದ್ದರೆ ಸಾಮಾನ್ಯ ವರ್ಗದ ಸೀಟುಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ವಂಚಿಸಲಾಗುತ್ತಿದೆ. ಈ ಹಿಂದೆ ಎಸ್‌ಸಿ, ಎಸ್‌ಟಿ ಕೋಟಾದಲ್ಲಿ ಸೀಟು ಸಿಗದಿದ್ದರೆ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಿ ಸೀಟು ಪಡೆಯುವ ಅವಕಾಶ ಇತ್ತು. ಆದರೆ, ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ಗಳ ಯಾವುದೇ ಆದೇಶ ಇಲ್ಲದಿದ್ದರೂ ಈಗ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
2018 ರಿಂದ ಎಸ್‌ಸಿ, ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಜಾಟಿಂಟ್ ಸೀಟ್ ಅಲಾಟ್ಮೆಂಟ್ ಅಥಾರಿಟಿ ಸಂಸ್ಥೆಯು, ವಿದ್ಯಾರ್ಥಿಗಳು ಅವರ ವರ್ಗದ ಮೀಸಲಾತಿಯಲ್ಲಿ ಅವಕಾಶ ಸಿಗದಿದ್ದರೆ ಸಾಮಾನ್ಯ ವರ್ಗದ ಸೀಟಿಗೆ ಸ್ಪರ್ಧಿಸುವಂತಿಲ್ಲ ಎಂಬ ಆದೇಶ ಮಾಡಿದ್ದು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಗಮನಹರಿಸಿ, ಆಡಳಿತ ವರ್ಗಗಳು ಮಾಡಿಕೊಂಡ ಈ ನಿಯಮ ತೆಗೆದುಹಾಕಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು. ನನ್ನ ಪುತ್ರಿ ಐಶ್ವರ್ಯ ಬಿ.ಇ ಮತ್ತು ಬಿ.ಟೆಕ್‌ನಲ್ಲಿ 10,083ನೇ ರ‍್ಯಾಂಕ್ ಪಡೆದಿದ್ದರೂ, ಸೀಟು ನೀಡದೇ ಅನ್ಯಾಯ ಮಾಡಲಾಗಿದೆ. ಈ ತಾರತಮ್ಯ ಪ್ರಶ್ನಿಸಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುತ್ತೇನೆ ಎಂದು ವಕೀಲ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ.