ದಾವಣಗೆರೆ: ಜಾತಿಗಣತಿ ಬಗ್ಗೆ ಶಾಸಕರು ತಮ್ಮ ಅನಿಸಿಕೆಗಳನ್ನು ಸದನದಲ್ಲಿ ವ್ಯಕ್ತಪಡಿಸಬಹುದಾಗಿದೆ. ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸರ್ಕಾರ ಮಾತ್ರ. ಸರಿ ಇಲ್ಲ ಎಂದು ಗೊತ್ತಾದಲ್ಲಿ ವರದಿಯನ್ನು ತಿರಸ್ಕಾರ ಮಾಡುವ ಶಕ್ತಿ ಸದನಕ್ಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಜಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಬಿಡುಗಡೆಗೆ ಪರ - ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, ವ್ಯವಸ್ಥೆ ಎಂದರೇ ಪರ ವಿರೋಧ ಎರಡು ಇರುತ್ತವೆ. ಜಾತಿ ಗಣತಿ ವರದಿ ಬಂದಮೇಲೆ ನೋಡೋಣ ಅದರಲ್ಲಿ ಏನ್ ಇದೆ ಎಂದು, ಇನ್ನು ವರದಿನೇ ಬಂದಿಲ್ಲ, ವರದಿ ಬಂದಮೇಲೆ ಬೇಕಾದರೇ ಅದರ ಚರ್ಚೆ ಮಾಡಬಹುದು. ಈ ಜಾತಿಗಣತಿ ಸರಿ ಇಲ್ಲ ಎಂದು ವರದಿಯನ್ನು ತಿರಸ್ಕರಿಸುವ ಶಕ್ತಿ ಸದನಕ್ಕಿದೆ. ವರದಿ ಬಂದಮೇಲೆ ಅದರ ಸಾಧಕ ಬಾಧಕದ ಬಗ್ಗೆ ತಿಳಿಯಬಹುದು ಎಂದರು.
ಅನ್ಯಾಯ ಆಗಿದ್ದರೆ ವಿರೋಧ ಮಾಡುವ ಹಕ್ಕಿದೆ: ಮನೆ ಮನೆಗೆ ತೆರಳಿ ಗಣತಿ ಮಾಡಿಲ್ಲ ಎಂಬ ಸ್ವಪಕ್ಷ ಶಾಸಕರಿಂದ ಆರೋಪ ಕೇಳಿ ಬಂದಿದೆ ಎಂಬ ಪ್ರಶ್ನೆಗೆ, ಇದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಸದನದಲ್ಲಿ ಶಾಸಕರು ವ್ಯಕ್ತಪಡಿಸಬಹುದಾಗಿದೆ. ಅವರು ಸದನದಲ್ಲಿ ಹೇಳುವುದು ಒಳ್ಳೆಯದು, ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸರ್ಕಾರ ಮಾತ್ರ. ಸರಿ ಇಲ್ಲ ಎಂದು ಗೊತ್ತಾದಲ್ಲಿ ಈ ಜಾತಿಗಣತಿ ವರದಿಯನ್ನು ತಿರಸ್ಕಾರ ಮಾಡಬಹುದು. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ವಿರೋಧ ಮಾಡುವ ಶಕ್ತಿ ಹಕ್ಕು ಇದೆ ಎಂದರು.
ಬಳಿಕ ಆಳಂದ ಶಾಸಕ ಬಿ.ಆರ್ ಪಾಟೀಲ್ ಅವರು ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಬಿ.ಆರ್ ಪಾಟೀಲ್ ಅವರಿಗೆ ಸಂಬಂಧಿಸಿದ್ದು, ಖುದ್ದಾಗಿ ಅವರಿಗೆ ಈ ಬಗ್ಗೆ ಕೇಳಿದರೆ ಉತ್ತರ ಸಿಗುತ್ತದೆ, ಅವರು ರಾಜೀನಾಮೆ ನೀಡುವುದಾಗಿ ಏಕೆ ಪತ್ರ ಬರೆದಿದ್ದಾರೆ ಎಂದು ನನಗೆ ಗೊತ್ತಿಲ್ಲ.
ಯಾವ ಸಚಿವರು ಮಾತು ಕೇಳಲ್ಲ ಎಂಬ ಬಗ್ಗೆ ಅವರಿಗೆ ಕೇಳಬೇಕು. ಅವರ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದು ಒಳ್ಳೆಯದಲ್ಲ ಎಂದು ಹೇಳಿದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ಅದು ಕೋರ್ಟ್ಗೆ ಸಂಬಂಧಿಸಿದ ವಿಷಯ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಅದರ ಬಗ್ಗೆ ತಿಳಿದುಕೊಂಡು ಬಳಿಕ ಮಾತನಾಡುವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಚಳಿಗಾಲ ಅಧಿವೇಶನದ ಬಳಿಕ ಮೈಸೂರಿನ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜನತಾದರ್ಶನ: ಸಚಿವ ಮಹದೇವಪ್ಪ