ದಾವಣಗೆರೆ : ನಂಜನಗೂಡಿನ ಜುಬಿಲಂಟ್ ಕಂಪನಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚೈನಾ ಕಂಟೇನರ್ ನಂಜನಗೂಡಿಗೆ ಬಂದಿದ್ದರಿಂದ ಕೊರೊನಾ ಸೋಂಕು ಬಂದಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಪರೀಕ್ಷಿಸಿದ ಬಳಿಕ ಅದು ಸುಳ್ಳು ಎಂಬುದು ಗೊತ್ತಾಗಿದೆ. ತಬ್ಲೀಘಿಗೆ ಮೈಸೂರು ಜಿಲ್ಲೆಯಿಂದ 88 ಜನ ಹೋಗಿದ್ದರು. ಈ ಪೈಕಿ 8 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಈ ಎರಡು ಘಟನೆ ಬಿಟ್ಟರೆ ವಿದೇಶದಿಂದ ಬಂದ ನಾಲ್ವರಲ್ಲಿ ಮಾತ್ರ ಸೋಂಕು ಕಂಡು ಬಂದಿದೆ ಎಂದು ತಿಳಿಸಿದರು.
ಜುಬಿಲಂಟ್ ಫ್ಯಾಕ್ಟರಿಗೆ ಡಿಸಿ, ಎಸ್ಪಿ, ನಂಜನಗೂಡು ಶಾಸಕ ಹರ್ಷವರ್ಧನ್ ಜೊತೆ ಭೇಟಿ ನೀಡಿ ಎಲ್ಲಾ ಮಾಹಿತಿ ಸಂಗ್ರಹಿಸಿದ್ದೇವೆ. ಈ ಬಗ್ಗೆ ಹರ್ಷವರ್ಧನ್ಗೂ ತಿಳಿಸಿದ್ದೇನೆ. ಈಗಾಗಲೇ ನಂಜನಗೂಡು ಪೂರ್ತಿ ಲಾಕ್ಡೌನ್ ಆಗಿದೆ. ಮೈಸೂರಿನಲ್ಲಿಯೂ ಬಿಗಿ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕಂಪನಿಯ 1562 ಜನರ ಪೈಕಿ 1010 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಇನ್ನುಳಿದವರ ರಕ್ತ ಪರೀಕ್ಷೆ ಮಾದರಿ ಇನ್ನೆರಡು ದಿನಗಳಲ್ಲಿ ಬರಲಿದೆ. ಕೊರೊನಾ ಭೀತಿ ದೂರವಾಗುವವರೆಗೆ ಕಂಪನಿ ಆರಂಭವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದು.