ದಾವಣಗೆರೆ: ಸಿದ್ದರಾಮಯ್ಯ ಕಳೆದ ಬಾರಿ ಚುನಾವಣೆಯಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಚಾಮುಂಡೇಶ್ವರಿಯಲ್ಲಿ ಸೋಲು ಅನುಭವಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದೇ ಬಹಳ ಕುತೂಹಲದ ವಿಷಯವಾಗಿದೆ. ಈ ನಡುವೆ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದೇನೆ. ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ. ಆದರೆ, ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರಕ್ಕೆ ಹೋಗುವ ಅವಶ್ಯಕತೆ ಇಲ್ಲ, ನಮ್ಮ ಹರಿಹರ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಲಿ ಎಂದರು.
ನಮ್ಮ ಹರಿಹರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ, ಕನಿಷ್ಠ ಐವತ್ತರಿಂದ ಅರವತ್ತು ಸಾವಿರ ಮತಗಳಿಂದ ಗೆಲ್ಲುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಬಿಜೆಪಿಯವರಿಗೆ ಧರ್ಮ ಜಾತಿ ಬಿಟ್ಟರೇ ಬೇರೆ ಏನೂ ಗೊತ್ತಿಲ್ಲ. ದಯಮಾಡಿ ಸಿದ್ದರಾಮಯ್ಯ ಅವರು ಹರಿಹರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಕೈ ಶಾಸಕ ಎಸ್ ರಾಮಪ್ಪ ವಿನಂತಿಸಿದರು.
ಇದನ್ನೂ ಓದಿ: ಡಿಕೆಶಿ ಜೈಲಿಗೆ ಹೋಗಲು ನೀವೇ ಕಾರಣರಲ್ಲವೇ?: ಸಿದ್ದು ಏಟಿಗೆ ಜೋಶಿ ತಿರುಗೇಟು