ದಾವಣಗೆರೆ : ಕೊರೊನಾ ನಿಯಂತ್ರಣಕ್ಕೆ, ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದೆ. ಜನರೂ ಕೂಡ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಮನವಿ ಮಾಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 526 ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲು ಅಗತ್ಯವಿರುವಷ್ಟು ತಯಾರಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ. ಒಂದು ತಿಂಗಳು ಜಿಲ್ಲೆಯಲ್ಲಿ ಯಾವುದೇ ಪ್ರಕರಣವಿಲ್ಲದೇ ಗ್ರೀನ್ ಝೋನ್‍ನಲ್ಲಿತ್ತು. ಆ ಸಮಯದಲ್ಲೂ ಹಲವಾರು ತಯಾರಿ ನಡೆಸಲಾಗಿತ್ತು, ಅದು ಈಗ ಉಪಯೋಗಕ್ಕೆ ಬರುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರು, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು ಸೇರಿದಂತೆ ಎಲ್ಲ ವೈದ್ಯರ ಸಹಕಾರ ಚೆನ್ನಾಗಿದೆ. ಜಾಲಿನಗರ, ಬಾಷಾನಗರ, ಇಮಾಮ್‍ನಗರ, ಎಸ್‍ಪಿಎಸ್ ನಗರ, ಬೇತೂರು ರಸ್ತೆ, ಕೆಟಿಜೆ ನಗರ ಮತ್ತು ಶಿವನಗರಗಳಲ್ಲಿ ಒಟ್ಟು 7 ಕಡೆಗಳಲ್ಲಿ ಕಂಟೇನ್‍ಮೆಂಟ್ ಝೋನ್ ಮಾಡಲಾಗಿದ್ದು, ಸೀಲ್‍ಡೌನ್ ಮಾಡಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ಪ್ರದೇಶಗಳನ್ನು ವ್ಯಾಪಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸೋಂಕಿತರ ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ಸೇರಿದಂತೆ ಕಂಟೇನ್‍ಮೆಂಟ್ ಝೋನ್‍ನಲ್ಲಿ ಬರುವ ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಿನಕ್ಕೆ 200 ಸ್ಯಾಂಪಲ್ ಕಳುಹಿಸುತ್ತಿದ್ದು, ಇದನ್ನು 400 ರಿಂದ 500 ರವರೆಗೆ ಹೆಚ್ಚಿಸಲು ಸೂಚಿಸಿದ್ದೇನೆ. ತೀವ್ರ ಉಸಿರಾಟದ ತೊಂದರೆ ಮತ್ತು ಶೀತ ಜ್ವರದಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಡ್ರೈವರ್, ಕ್ಲೀನರ್ಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ರೋಗಿಗಳನ್ನು ಉಳಿಸಲು ತಜ್ಞರ ತಂಡ :
ನಗರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳು, ವಿವಿಧ ನರ್ಸಿಂಗ್ ಹೋಂಗಳ ತಜ್ಞರು, ಜಿಲ್ಲಾಸ್ಪತ್ರೆಯ ತಜ್ಞರಿದ್ದು, ಇಎನ್‍ಟಿ, ಪಲ್ಮನಾಲಜಿ ಸೇರಿದಂತೆ ಇತರ ತಜ್ಞ ವೈದ್ಯರನ್ನೊಳಗೊಂಡ ಎರಡು ತಜ್ಞ ವೈದ್ಯರ ರಚಿಸಿಕೊಂಡು ನಿತ್ಯ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪ್ರಸ್ತುತ 5 ರೋಗಿಗಳು ಹೈಫ್ಲೋ ಆಕ್ಸಿಜನ್ ಥೆರಪಿಯಲ್ಲಿದ್ದು, ಒಬ್ಬರು ಗಂಭೀರ ಸ್ಥಿತಿ ತಲುಪಿದ್ದರು, ಇದೀಗ ಆ ರೋಗಿಯೂ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪ್ರತಿ ಪ್ರಕರಣಗಳಲ್ಲಿ ರೋಗಿಯ ಜೀವ ಉಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದರು.