ದಾವಣಗೆರೆ: ತಮಿಳು ನಟ ಕಾರ್ತಿಕ್ ಅಭಿನಯದ ಖಾಕಿ ಸಿನಿಮಾದಲ್ಲಿನ ದರೋಡೆಯ ದೃಶ್ಯಗಳನ್ನು ನೋಡಿದರೆ ಎಂಥವರಿಗೂ ಎದೆ ಝಲ್ ಅನಿಸುತ್ತೆ. ಈ ಸಿನಿಮಾದಲ್ಲಿ ಒಂಟಿ ಮನೆಗಳ ಮೇಲೆ ದಾಳಿ ಮಾಡುವ ಡಕಾಯಿತರ ತಂಡ ಮನೆಯವರ ಮೇಲೆ ಹಲ್ಲೆ ನಡೆಸಿ ನಗನಾಣ್ಯ ದೋಚಿ ಪರಾರಿಯಾಗುತ್ತಿರುತ್ತಾರೆ. ಥೇಟ್ ಅದೇ ರೀತಿಯ ದರೋಡೆ ಬೆಣ್ಣೆ ನಗರಿಯನ್ನು ಬೆಚ್ಚಿ ಬೀಳಿಸಿದೆ.
ದಾವಣಗೆರೆ ಹೊರವಲಯದ ಡಾಲರ್ಸ್ ಕಾಲೋನಿಯಲ್ಲಿ, ಕಳೆದ ರಾತ್ರಿ ಈ ಘಟನೆ ನಡೆದಿದೆ. ಚಂದ್ರಶೇಖರಪ್ಪ ಎಂಬುವರ ಮನೆಗೆ ಆರು ಜನ ದರೋಡೆಕೋರರ ಗ್ಯಾಂಗ್ ಬಾಗಿಲು ಮುರಿದು ಒಳ ನುಗ್ಗಿತ್ತು. ಚಂದ್ರಶೇಖರ್ ಪತ್ನಿ ಹಾಗೂ ಅವರ ಮಗನ ಮೇಲೆ ಹಲ್ಲೆ ಮಾಡಿ, ಇಬ್ಬರನ್ನು ಕಟ್ಟಿಹಾಕಿ, ಮನೆಯಲ್ಲಿನ ಚಿನ್ನಾಭರಣ ಹಾಗೂ ನಗದನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಕಳೆದ ರಾತ್ರಿ 1 ಗಂಟೆಗೆ ಮನೆಯ ಬಾಗಿಲಿನ ಕಬ್ಬಿಣದ ಸರಳನ್ನು ಮುರಿಯುತ್ತಿದ್ದಾಗ ಸದ್ದು ಕೇಳಿ ಚಂದ್ರಶೇಖರ್ ಕೋಣೆಯಿಂದ ಹೊರಬರುತ್ತಿದ್ದಂತೆ ಲಾಂಗು, ಮಚ್ಚು ಹಿಡಿದಿದ್ದ ದರೋಡೆಕೋರರನ್ನು ಕಂಡು ಚಂದ್ರಶೇಖರ್ ಭಯದಿಂದ ಓಡಿ ಹೋಗಿ ಕೋಣೆಯ ಬಾಗಿಲು ಹಾಕಿಕೊಂಡಿದ್ದಾರೆ.
ಜೊತೆಗೆ ಮತ್ತೊಂದು ರೂಮಿನಲ್ಲಿದ್ದ ತಮ್ಮ ಹೆಂಡತಿ ಮಕ್ಕಳಿಗೆ ಕೂಗಿ ಬಾಗಿಲು ಹಾಕಿಕೊಳ್ಳುವಂತೆ ಹೇಳುವ ಹೊತ್ತಿಗೆ ದರೋಡೆಕೋರರು ಒಳನುಗ್ಗಿ ಚಂದ್ರಶೇಖರ್ ಪತ್ನಿ ಹಾಗೂ ಮನನಿಗೆ ಲಾಂಗು ಮಚ್ಚುಗಳನ್ನ ತೋರಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಅವರನ್ನು ಕಟ್ಟಿ ಹಾಕಿ ಮಾಂಗಲ್ಯ, ಬಳೆ ಚೈನು ಸೇರಿದಂತೆ 8 ಸಾವಿರ ನಗದನ್ನು ಕಳ್ಳರು ದೋಚಿ ಎಸ್ಕೇಪ್ ಆಗಿದ್ದಾರೆ.
ಇದೀಗ ದರೋಡೆ ಗ್ಯಾಂಗ್ ನ ಈ ಕೃತ್ಯದಿಂದ ಬೆಣ್ಣೆನಗರಿ ದಾವಣಗೆರೆ ಬೆಚ್ಚಿಬಿದ್ದಿದ್ದು, ಕಾಲೋನಿಯಲ್ಲಿ ಪೊಲೀಸ್ ಭದ್ರತೆ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದಷ್ಟು ಬೇಗ ಪೊಲೀಸರು ಎಚ್ಚೆತ್ತುಕೊಂಡು ದರೋಡೆ ಗ್ಯಾಂಗ್ ಅನ್ನು ಬಂಧಿಸುವ ಮೂಲಕ ಜನರ ಆತಂಕ ದೂರ ಮಾಡಬೇಕಿದೆ.